ತಿರುವನಂತಪುರಂ: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಿದೆ ಎಂದು ಕೇಂದ್ರ ಗೃಹ ಸಚಿವಾಲಯ ನಿನ್ನೆ ಪ್ರಕಟಿಸಿದ ಬೆನ್ನಿಗೇ ಕೇರಳ ಇದನ್ನು ಬೆಂಬಲಿಸುವುದಿಲ್ಲ ಎಂದು ಮುಖ್ಯಮಂತ್ರಿ ವಿಚಿತ್ರ ಹೇಳಿಕೆ ನೀಡಿದ್ದಾರೆ.
2019 ರಲ್ಲಿ ಅಂಗೀಕರಿಸಿದ ಸಿಎಎ ಮಸೂದೆ ಈಗ ಜಾರಿಗೆ ಬಂದಿದೆ. ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಬಯಸುವವರಿಗೆ ಶೀಘ್ರದಲ್ಲೇ ಸಿಎಎ ಪೋರ್ಟಲ್ ಅನ್ನು ಪ್ರಾರಂಭಿಸಲಾಗುವುದು ಎಂದು ಗೃಹ ವ್ಯವಹಾರಗಳ ಸಚಿವಾಲಯ ಪ್ರಕಟಿಸಿದೆ. ಈ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಹಳೆ ಚಾಳಿ ಪುನರಾವರ್ತಿಸಿದ್ದಾರೆ.
ಸಿಎಎ ಜಾರಿಗೊಳಿಸಲು ರಾಜ್ಯ ಸರ್ಕಾರದ ಅನುಮತಿ ಅಗತ್ಯವಿಲ್ಲದ ಕಾರಣ ಕೇರಳದಲ್ಲಿ ಇದನ್ನು ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಪುನರಾವರ್ತನೆ ಮಾಡುತ್ತಿದ್ದಾರೆ. ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವ ಕಾನೂನಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರೂ, ಸಿಎಎ ಸಮಾಜದ ಮುಸ್ಲಿಂ ಜನರನ್ನು ಹೊಡೆದೋಡಿಸಲು ಗುರಿಯನ್ನು ಹೊಂದಿರುವ ಕಾನೂನು ಎಂದು ಸ್ಥಾಪಿಸಲು ಮುಖ್ಯಮಂತ್ರಿ ಎಡಪಂಥೀಯ ವಿಧಾನವನ್ನು ಪುನರುಚ್ಚರಿಸಿದರು. ಮುಸ್ಲಿಂ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಪರಿಗಣಿಸುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಕೇರಳದಲ್ಲಿ ಜಾರಿಗೊಳಿಸುವುದಿಲ್ಲ ಎಂದು ನಿನ್ನೆ ಸಂಜೆ ಮತ್ತೆ ಒತ್ತಿಹೇಳಿದರು. ಸಿಎಎ ಒಂದು ಕೋಮು ಕಾನೂನು ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿ, ಪೌರತ್ವ ಕಾಯ್ದೆಯನ್ನು ವಿರೋಧಿಸಲು ಕೇರಳ ಒಗ್ಗಟ್ಟಾಗಿ ನಿಲ್ಲುತ್ತದೆ ಎಂದು ಹೇಳಿದರು. ಫೇಸ್ ಬುಕ್ ಪೋಸ್ಟ್ ಮೂಲಕ ಅವರು ಪ್ರತಿಕ್ರಿಯೆ ನೀಡಿರುವರು.
ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಆಶ್ರಯ ಕೋರಿ ಭಾರತಕ್ಕೆ ವಲಸೆ ಬಂದಿರುವ ಅಲ್ಪಸಂಖ್ಯಾತರಿಗೆ (ಹಿಂದೂ, ಸಿಖ್, ಜೈನ್, ಪಾರ್ಸಿ, ಬೌದ್ಧ, ಕ್ರಿಶ್ಚಿಯನ್) ಪೌರತ್ವ ತಿದ್ದುಪಡಿ ಕಾಯ್ದೆಯು ಪೌರತ್ವ ನೀಡುವುದಾಗಿ ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.


