ಕಾಸರಗೋಡು: ಕೇಂದ್ರ ಸರ್ಕಾರ ಘೋಷಿಸಿರುವ ರೂಫ್ ಟಾಪ್ ಸೋಲಾರ್'ನ ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತಿ ಬಿಜಿಲಿ ಯೋಜನೆ'ಯಲ್ಲಿ ಸದಸ್ಯರಾಗಲು ಅಂಚೆ ಕಚೇರಿಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಭಾರತದಲ್ಲಿನ ಮನೆಗಳಿಗೆ ತಿಂಗಳಿಗೆ 300 ಯೂನಿಟ್‍ಗಳವರೆಗೆ ಉಚಿತ ವಿದ್ಯುತ್ ಅನ್ನು ಒದಗಿಸುವ ಗುರಿಯನ್ನು ಹೊಂದಿದೆ. ಯೋಜನೆಯ ಪ್ರಕಾರ ಮನೆಗಳ ಮೇಲ್ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು ಸಹಾಯಧನ ನೀಡಲಾಗುವುದು. ಸೌರ ಫಲಕಗಳ ವೆಚ್ಚದ 40% ವರೆಗೆ ಸಬ್ಸಿಡಿ ಲಭ್ಯವಿದೆ. ಈ ಯೋಜನೆಯು ಭಾರತದಾದ್ಯಂತ ಒಂದು ಕೋಟಿ ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಯ ಮೂಲಕ ಸರ್ಕಾರಕ್ಕೆ ವಾರ್ಷಿಕ 75,000 ಕೋಟಿ ವಿದ್ಯುತ್ ವೆಚ್ಚ ಉಳಿತಾಯವಾಗಲಿದೆ ಎಂದು ಅಂದಾಜಿಸಲಾಗಿದೆ. ಮಾರ್ಚ್ 8ರ ವರೆಗೆ ಯೋಜನೆಗೆ ನೋಂದಾಯಿಸಲು ಅವಕಾಶವಿದೆ ಪ್ರಸಕ್ತ ತಮ್ಮ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಹೊಂದಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಅಂಚೆ ಕಚೇರಿಯನ್ನು ಸಂಪರ್ಕಿಸಲು ಕಾಸರಗೋಡು ಅಂಚೆ ಅಧೀಕ್ಷಕಿ ಪಿ.ಆರ್.ಶೀಲಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

