ನವದೆಹಲಿ: 'ಭಾರತವು 'ಕಾರ್ಯತಂತ್ರ ಸ್ವಾಯತ್ತತೆ' ಬಯಸಲಿದೆ ಎಂಬುದನ್ನು ನಾನು ಗೌರವಿಸುತ್ತೇನೆ. ಆದರೆ, ಬಿಕ್ಕಟ್ಟಿನ ಸಂದರ್ಭದಲ್ಲಿ ಅಂತಹದು ಇರುವುದಿಲ್ಲ' ಎಂದು ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಶುಕ್ರವಾರ ಪ್ರತಿಪಾದಿಸಿದರು.
0
samarasasudhi
ಜುಲೈ 13, 2024
ನವದೆಹಲಿ: 'ಭಾರತವು 'ಕಾರ್ಯತಂತ್ರ ಸ್ವಾಯತ್ತತೆ' ಬಯಸಲಿದೆ ಎಂಬುದನ್ನು ನಾನು ಗೌರವಿಸುತ್ತೇನೆ. ಆದರೆ, ಬಿಕ್ಕಟ್ಟಿನ ಸಂದರ್ಭದಲ್ಲಿ ಅಂತಹದು ಇರುವುದಿಲ್ಲ' ಎಂದು ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟಿ ಶುಕ್ರವಾರ ಪ್ರತಿಪಾದಿಸಿದರು.
ಇಲ್ಲಿ ನಡೆದ ರಕ್ಷಣಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದರ ಜೊತೆಗೆ 'ಭಾರತ-ಅಮೆರಿಕ ನಡುವೆ ಬಾಂಧವ್ಯ ಇನ್ನಷ್ಟು ಸದೃಢಗೊಳ್ಳಬೇಕು' ಎಂದೂ ಪ್ರತಿಪಾದಿಸಿದರು.
'ಈಗಿನ ಸ್ಥಿತಿಯಲ್ಲಿ ಯಾರೊಬ್ಬರು ಕೇವಲ ಶಾಂತಿ ಸ್ಥಾಪನೆ ನಿಲುವು ತಳೆಯಲಾಗದು. ಶಾಂತಿಮಂತ್ರ ಬಿಟ್ಟು ಯುದ್ಧಪರಿಕರಗಳ ಜೊತೆಗೆ ಆಟವಾಡುವವರ ಕುರಿತು ದೃಢವಾದ ನಿಲುವೂ ತಳೆಯಬೇಕಾಗುತ್ತದೆ. ತಟಸ್ಥರಾಗಿ ಉಳಿಯಲಾಗದು' ಎಂದು ಹೇಳಿದರು.
ರಷ್ಯಾ ಜೊತೆಗೆ ಭಾರತ ಹೊಂದಿರುವ ಸಹಭಾಗಿತ್ವದ ಹೊರತಾಗಿಯೂ ಭಾರತ ಜೊತೆಗಿನ ಕಾರ್ಯತಂತ್ರ ಪಾಲುದಾರಿಕೆ ಮುಂದುವರಿಯಲಿದೆ ಎಂದು ಜೋ ಬೈಡನ್ ಅವರು ಹೇಳಿಕೆ ಹಿಂದೆಯೇ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
'ಭಾರತ ಬಗ್ಗೆ ನನಗೆ ಅರಿವಿದೆ. ಭಾರತ ಕಾರ್ಯತಂತ್ರ ಸ್ವಾಯತ್ತತೆ ಬಯಸಲಿದೆ ಎಂಬುದನ್ನು ಗೌರವಿಸುತ್ತೇನೆ.ಆದರೆ, ಬಿಕ್ಕಟ್ಟಿನ ಕಾಲಘಟ್ಟದಲ್ಲಿ ಅದು ಇರುವುದಿಲ್ಲ. ಬಿಕ್ಕಟ್ಟಿನ ಸಂದರ್ಭದಲ್ಲಿ ಪರಸ್ಪರರ ಅರಿವು ಇರಬೇಕು. ಇದಕ್ಕೆ ಏನು ಹೆಸರಿಡಬೇಕೋ ತಿಳಿಯದು. ಆದರೆ, ನಾವು ಸಂಕಷ್ಟದಲ್ಲಿ ನೆರವಾಗುವ ವಿಶ್ವಸಾರ್ಹ ಗೆಳೆಯರು, ಸಹೋದರರು, ಸಹೊದ್ಯೋಗಿಗಳು ಎಂಬುದು ತಿಳಿದಿರಬೇಕು' ಎಂದು ಗಾರ್ಸೆಟ್ಟಿ ಅಭಿಪ್ರಾಯಪಟ್ಟರು.