ಕುಂಬಳೆ : ಕುಂಬಳೆ ಪೇಟೆಯ ಹೈಪರ್ ಮಾರ್ಕೆಟ್ ಒಳಗೆ ಕಾಡುಹಂದಿ ನುಗ್ಗಿ ಸಾಮಗ್ರಿ ಚಲ್ಲಾಪಿಲ್ಲಿಗೊಳಿಸುವ ಮೂಲಕ ಸಂಸ್ಥೆ ಸಿಬ್ಬಂದಿಯನ್ನು ಆತಂಕಕ್ಕೆ ತಳ್ಳಿದೆ. ಕುಂಬಳೆಯ ಸ್ಮಾರ್ಟ್ ಪಾಯಿಂಟ್ ಹೈಪರ್ ಮಾರ್ಕೆಟ್‍ಗೆ ಮಂಗಳವಾರ ರಾತ್ರಿ 9ರ ವೇಳೆಗೆ ಕಾಡುಹಂದಿ ಏಕಾಏಕಿ ನುಗ್ಗಿದ್ದು, ಇದರಿಂದ ಸಂಸ್ಥೆ ಸಿಬ್ಬಂದಿ ವಿಚಲಿತರಾಗಿ ಹೊರಕ್ಕೆ ದೌಡಾಯಿಸಿದ್ದಾರೆ. ರಾತ್ರಿವೇಳೆ ಗ್ರಾಹಕರ ಸಂಖ್ಯೆ ಕಡಿಮೆಯಿದ್ದ ಕಾರಣ ಜೀವಾಪಾಯವುಂಟಾಗಿಲ್ಲ. ಸಂಸ್ಥೆ ಸಿಬ್ಬಂದಿ ಹೊರಕ್ಕೆ ಓಡುತ್ತಿದ್ದಂತೆ ಹಂದಿ ಸಾಮಗ್ರಿ ಚಲ್ಲಾಪಿಲ್ಲಿಗೊಳಿಸಿ ಅತ್ತಿತ್ತ ಓಡಾಟ ನಡೆಸಿದ್ದು, ನಂತರ ಹೊರಹೋಗಿ ಶಾಲಾ ಮೈದಾನದ ಮೂಲಕ ಮರೆಯಾಗಿದೆ.
ಇತ್ತೀಚೆಗೆ ಕುಂಬಳೆ ಪೇಟೆಯಲ್ಲಿ ಕಾಡುಹಂದಿ ಹಲವು ವಾಹನಗಳ ಮೇಲೆ ದಾಳಿ ನಡೆಸಿದ್ದು, ಹಲವರು ಗಾಯಗೊಂಡಿದ್ದರು. ನಡಿನಲ್ಲಿ ತೋಟಗಳಿಗೆ ನುಗ್ಗಿ ಕೃಷಿಹಾಳುಗೈಯುತ್ತಿದ್ದ ಕಾಡುಹಂದಿ ಜನಸಂಚಾರವಿರುವ ಪೇಟೆಯ ಹೈಪರ್ ಮಾರ್ಕೆಟ್‍ಗಳಿಗೂ ನುಗ್ಗಿ ದಾಂಧಲೆಗೆ ಮುಂದಾಗುತ್ತಿರುವುದು ಜನರಲ್ಲಿ ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ.


