ತಿರುವನಂತಪುರಂ: ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದ (VSSC) ಯೋಜನಾ ನಿರ್ದೇಶಕ, ಹಿರಿಯ ವಿಜ್ಞಾನಿ ಎಂ. ಮೋಹನ್ ಅವರನ್ನು ಇಸ್ರೊದ ಪ್ರಮುಖ ಅಂಗಸ್ಥೆಯಾದ 'ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್'ನ (LPSC) ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಧ್ಯಕ್ಷ ಡಾ. ವಿ. ನಾರಾಯಣನ್ ಅವರು ಈ ಆದೇಶ ಹೊರಡಿಸಿದ್ದಾರೆ.
ಇಸ್ರೊದೊಂದಿಗೆ 20 ವರ್ಷಕ್ಕೂ ಹೆಚ್ಚು ಕೆಲಸ ಮಾಡಿರುವ ಎಂ. ಮೋಹನ್ ಅವರು ಕೇರಳದ ಅಲಪ್ಪುಳ ಮೂಲದವರು.
ಈ ಮೊದಲು LPSC ನಿರ್ದೇಶಕರಾಗಿದ್ದ ವಿ. ನಾರಾಯಣನ್ ಅವರನ್ನು ಇಸ್ರೊ ಅಧ್ಯಕ್ಷರನ್ನಾಗಿ ಇತ್ತೀಚೆಗೆ ಕೇಂದ್ರ ಸರ್ಕಾರ ನೇಮಿಸಿತ್ತು. ಹೀಗಾಗಿ ಆ ಸ್ಥಾನ ತೆರವಾಗಿತ್ತು.
ಕೇರಳದ ತಿರುವನಂತಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ LPSC ಇಸ್ರೊದ ರಾಕೆಟ್‌ಗಳಿಗೆ ಮತ್ತು ಬಾಹ್ಯಾಕಾಶ ನೌಕೆಗಳಿಗೆ ಬೇಕಾದ ಸಂಚಾಲನೆಯ (ಪ್ರೊಪಲ್ಷನ್) ಸಾಧನ ಸಲಕರಣೆಗಳ ಅಭಿವೃದ್ಧಿ, ಸಂಶೋಧನೆ ಮಾಡುತ್ತದೆ. ಬೆಂಗಳೂರಿನಲ್ಲಿಯೂ ಈ ಸಂಸ್ಥೆಯ ಕಚೇರಿ ಇದೆ.
ಇಸ್ರೊ ಅಧ್ಯಕ್ಷರಾಗಿದ್ದ ವಿ. ಸೋಮನಾಥ್ ಅವರ ಅಧಿಕಾರಾವಧಿ ಇದೇ ಜನವರಿ 14ರಂದು ಅಂತ್ಯವಾಗಿತ್ತು.

