ನವದೆಹಲಿ: 'ರೈತನು ರೈತನೇ, ಅದು ಕೇರಳ, ಕರ್ನಾಟಕ ಅಥವಾ ದೇಶದ ಯಾವುದೇ ರಾಜ್ಯದವರಾಗಿರಬಹುದು. ಕೇಂದ್ರ ಸರ್ಕಾರ ರೈತರೊಂದಿಗೆ ಸದಾ ನಿಲ್ಲುತ್ತದೆ. ಯಾರೊಂದಿಗೂ ತಾರತಮ್ಯ ಮಾಡುವುದಿಲ್ಲ' ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಂಗಳವಾರ ಹೇಳಿದ್ದಾರೆ.
ಲೋಕಸಭೆಯಲ್ಲಿ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ರೈತರು ದೇಶದ ಯಾವುದೇ ಭಾಗದವರಾಗಿರಬಹುದು. ನಾವೆಲ್ಲರೂ ಭಾರತ ಮಾತೆಯ ಮಕ್ಕಳು ಮತ್ತು ಯಾರ ವಿರುದ್ಧವೂ ಯಾವುದೇ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಕೇರಳದ ವಯನಾಡು, ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳು ಸೇರಿದಂತೆ ರೈತರ ವಿದರ್ಭ ಪ್ಯಾಕೇಜ್ ಅನುಷ್ಠಾನದ ಕುರಿತು ವಾದ್ರಾ ಮಾಹಿತಿ ಕೋರಿದ್ದರು.
ಸಗಟು ಮಾರುಕಟ್ಟೆಗಳಲ್ಲಿ ಕೆಂಪು ಮೆಣಸಿನಕಾಯಿಯ ಬೆಲೆ ಕುಸಿದಾಗ, ಕೇಂದ್ರವು ಕ್ವಿಂಟಲ್‌ಗೆ ₹11,000 ಗಿಂತ ಹೆಚ್ಚಿನ ಬೆಲೆಗೆ ಖರೀದಿಸಲು ಮುಂದಾಗಿದೆ ಎಂದು ಚೌಹಾಣ್ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಅಡಿಕೆ ಬೆಳೆ ರೋಗದಿಂದ ನಾಶವಾಗಿ ನಷ್ಟ ಅನುಭವಿಸಿದ ಕಾರಣ ಕೇಂದ್ರವು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿತ್ತು ಎಂದು ಅವರು ತಿಳಿಸಿದ್ದಾರೆ.
ನೈಸರ್ಗಿಕ ವಿಕೋಪ ಕಾರಣಗಳಿಂದಾಗಿ ದೇಶದ ಯಾವುದೇ ರಾಜ್ಯದ ರೈತರು ಕಷ್ಟಗಳನ್ನು ಎದುರಿಸಿದರೂ ಕೇಂದ್ರ ಸರ್ಕಾರ ಅವರೊಂದಿಗೆ ನಿಲ್ಲುತ್ತದೆ ಎಂದು ಚೌಹಾಣ್ ಹೇಳಿದ್ದಾರೆ.




