ಲಂಡನ್: ಟ್ರಂಪ್ ಅವರ ಸುಂಕ ಯುದ್ಧದ ಪರಿಣಾಮವಾಗಿ ವಿಶ್ವದಾದ್ಯಂತ ದೇಶಗಳು ತಮ್ಮ ವ್ಯಾಪಾರ ತಂತ್ರಗಳನ್ನು ಮರುಪರಿಶೀಲಿಸುತ್ತಿರುವ ಬೆನ್ನಲ್ಲೇ, ಭಾರತ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ದೀರ್ಘಕಾಲದಿಂದ ನಿಧಾನಗತಿಯಲ್ಲಿ ಸಾಗುತ್ತಿದ್ದ ಮುಕ್ತ ವ್ಯಾಪಾರ ಒಪ್ಪಂದ (FTA) ಮಾತುಕತೆಗಳಲ್ಲಿ ಮತ್ತೊಮ್ಮೆ ಗಂಭೀರತೆ ತೋರಿಸಿವೆ.
ಇತ್ತೀಚೆಗೆ ಲಂಡನ್‌ನಲ್ಲಿ ನಡೆದ '13ನೇ ಆರ್ಥಿಕ ಮತ್ತು ಹಣಕಾಸು ಸಂವಾದ'ದಲ್ಲಿ ಭಾರತದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಯುಕೆಯ ಹಣಕಾಸು ಕುಲಪತಿ ರಾಚೆಲ್ ರೀವ್ಸ್ ಸಹ-ಅಧ್ಯಕ್ಷತೆ ವಹಿಸಿ, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಮತ್ತು FTA ಹಾಗೂ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ಮಾತುಕತೆಗಳನ್ನು ಮುಂದುವರಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.
ದ್ವಿಪಕ್ಷೀಯ ಮಾತುಕತೆ ನಂತರ ಹೇಳಿಕೆ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಯುಕೆಯ ಪ್ರತಿನಿಧಿಗಳು ತಮ್ಮ ಮುಂಬರುವ ಕೈಗಾರಿಕಾ ಕಾರ್ಯತಂತ್ರವನ್ನು ಹಂಚಿಕೊಳ್ಳುವ ಉತ್ಸಾಹವನ್ನು ವ್ಯಕ್ತಪಡಿಸಿದರು. ಈ ಕಾರ್ಯತಂತ್ರದಲ್ಲಿ ಮುಂದುವರಿದ ಉತ್ಪಾದನೆ ಮತ್ತು ಜೀವ ವಿಜ್ಞಾನಗಳಂತಹ ಬೆಳವಣಿಗೆಯ ಆದ್ಯತಾ ಕ್ಷೇತ್ರಗಳು ಒಳಗೊಂಡಿದ್ದು, ಇಲ್ಲಿ ಬ್ರಿಟಿಷ್ ಪರಿಣತಿ ಮತ್ತು ಸಂಶೋಧನಾ ಸಾಮರ್ಥ್ಯಗಳು ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ರೂಪಿಸಲು ಸಹಕಾರಿಯಾಗಲಿವೆ. ಶುದ್ಧ ಇಂಧನ, ವೃತ್ತಿಪರ ಮತ್ತು ವ್ಯವಹಾರ ಸೇವೆಗಳು, ಹಣಕಾಸು ಸೇವೆಗಳು, ಸೃಜನಶೀಲ ಕೈಗಾರಿಕೆಗಳು ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಈ ಪಾಲುದಾರಿಕೆ ಹೊಂದಿದೆ.
ಕೈಗಾರಿಕಾ ಸಂಬಂಧಗಳನ್ನು ಗಟ್ಟಿಗೊಳಿಸಲು ಮತ್ತು ಪೂರೈಕೆ ಸರಪಳಿಯನ್ನು ಬೆಂಬಲಿಸಲು 'ಭಾರತ-ಯುಕೆ ರಕ್ಷಣಾ ಕೈಗಾರಿಕಾ ಮಾರ್ಗಸೂಚಿ'ಗೆ ಸಹಿ ಹಾಕುವ ಪ್ರಸ್ತಾವವನ್ನು ಎರಡೂ ದೇಶಗಳು ಪರಿಗಣಿಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಹಣಕಾಸು ಸೇವೆಗಳ ವ್ಯಾಪಾರದಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದ್ದು, ಇದನ್ನು ಮತ್ತಷ್ಟು ವಿಸ್ತರಿಸಲು ಒಟ್ಟಾಗಿ ಕಾರ್ಯನಿರ್ವಹಿಸುವ ಇರಾದೆಯನ್ನು ಉಭಯ ದೇಶಗಳು ತೋರಿವೆ.

ಡಿಸೆಂಬರ್ 2024ರಲ್ಲಿ ಭಾರತದ GIFT ಸಿಟಿ IFSCಯಲ್ಲಿ ನಡೆದ ಹಣಕಾಸು ಮಾರುಕಟ್ಟೆಗಳ ಸಂವಾದ (FMD) ಬ್ಯಾಂಕಿಂಗ್, ವಿಮೆ, ಪಿಂಚಣಿ, ಬಂಡವಾಳ ಮಾರುಕಟ್ಟೆಗಳು ಮತ್ತು ಸುಸ್ಥಿರ ಹಣಕಾಸು ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢಗೊಳಿಸುವ ಅವಕಾಶವನ್ನು ಒದಗಿಸಿತು. ಈ ವರ್ಷಾಂತ್ಯದಲ್ಲಿ ಲಂಡನ್‌ನಲ್ಲಿ ಮುಂದಿನ FMDಗಾಗಿ ಎರಡೂ ದೇಶಗಳ ತಂಡಗಳು ಭೇಟಿಯಾಗಲಿವೆ ಎಂದು ಜಂಟಿ ಹೇಳಿಕೆ ತಿಳಿಸಿದೆ.ಈ ಸಂವಾದದಲ್ಲಿ ಭಾರತೀಯ ರೂಪಾಯಿಯ ಅಂತರರಾಷ್ಟ್ರೀಕರಣದ ಬಗ್ಗೆಯೂ ಚರ್ಚೆ ನಡೆದಿದ್ದು, ರೂಪಾಯಿಯನ್ನು ಅಂತರರಾಷ್ಟ್ರೀಯ ಕರೆನ್ಸಿಯಾಗಿ ಬೆಳೆಸುವ ದಿಕ್ಕಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಲಿದೆ.
ಬದಲಾಗುತ್ತಿರುವ ಜಾಗತಿಕ ವ್ಯಾಪಾರ ಕ್ರಮದ ಮಧ್ಯೆ ಭಾರತ ಮತ್ತು ಯುಕೆ ತಮ್ಮ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ದೃಷ್ಟಿಯಿಂದ ಈ ಮಾತುಕತೆಗಳನ್ನು ತೀವ್ರಗೊಳಿಸಿವೆ. FTA ಮತ್ತು ಇತರ ಒಪ್ಪಂದಗಳು ಯಶಸ್ವಿಯಾದರೆ, ಎರಡೂ ದೇಶಗಳ ಆರ್ಥಿಕತೆಗೆ ಗಣನೀಯ ಉತ್ತೇಜನ ಸಿಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




