ನವದೆಹಲಿ: ರಿಸರ್ವ್ ಬ್ಯಾಂಕ್ ಸಾಲದ ಬಡ್ಡಿಯನ್ನು ಕಡಿಮೆ ಮಾಡಿದ ನಂತರ, ದೇಶದ ಬ್ಯಾಂಕುಗಳು ಸ್ಥಿರ ಠೇವಣಿಗಳ ಬಡ್ಡಿದರವನ್ನು ಕಡಿಮೆ ಮಾಡಲು ಪ್ರಾರಂಭಿಸಿವೆ. ಇದೀಗ ಸಾರ್ವಜನಿಕ ವಲಯದ ಬ್ಯಾಂಕ್ ಕೆನರಾ ಬ್ಯಾಂಕ್ 3 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿಗಳ ಬಡ್ಡಿದರವನ್ನು 20 ಬೇಸಿಸ್ ಪಾಯಿಂಟ್‌ಗಳವರೆಗೆ (bps) ಕಡಿಮೆ ಮಾಡಿದೆ.
ಪರಿಷ್ಕೃತ ಬಡ್ಡಿದರಗಳು ಇಂದಿನಿಂದಲೇ ಜಾರಿಗೆ ಬಂದಿವೆ ಎಂದು ಬ್ಯಾಂಕಿನ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.
ಕೆನರಾ ಬ್ಯಾಂಕಿನ ಇತ್ತೀಚಿನ ಎಫ್‌ಡಿ ದರಗಳು: ಒಂದು ವಾರದಿಂದ 45 ದಿನಗಳವರೆಗೆ ಅವಧಿಯಿರುವ ಸ್ಥಿರ ಠೇವಣಿಗಳಿಗೆ ಬ್ಯಾಂಕ್ ಈಗ 4% ಬಡ್ಡಿಯನ್ನು ನೀಡುತ್ತದೆ. 46 ರಿಂದ 90 ದಿನಗಳವರೆಗೆ ಅವಧಿಯಿರುವ ಠೇವಣಿಗಳಿಗೆ 5.25% ಬಡ್ಡಿಯನ್ನು ನೀಡಲಾಗುತ್ತಿದೆ. 91 ರಿಂದ 179 ದಿನಗಳವರೆಗೆ ಅವಧಿಯಿರುವ ಠೇವಣಿಗಳಿಗೆ 5.5% ಬಡ್ಡಿಯನ್ನು ನೀಡಲಾಗುತ್ತಿದೆ. 180 ರಿಂದ 269 ದಿನಗಳವರೆಗೆ ಅವಧಿಯಿರುವ ಸ್ಥಿರ ಠೇವಣಿಗಳ ಬಡ್ಡಿದರವನ್ನು 6.25% ರಿಂದ 6.15% ಕ್ಕೆ ಬ್ಯಾಂಕ್ ಕಡಿಮೆ ಮಾಡಿದೆ. 270 ದಿನಗಳಿಂದ ಒಂದು ವರ್ಷದವರೆಗೆ ಅವಧಿಯಿರುವ ಠೇವಣಿಗಳಿಗೆ ಈಗ 6.25% ಬಡ್ಡಿಯನ್ನು ನೀಡಲಾಗುತ್ತದೆ. ಒಂದು ವರ್ಷದೊಳಗೆ ಅವಧಿ ಮುಗಿಯುವ ಸ್ಥಿರ ಠೇವಣಿಗಳಿಗೆ 6.85% ಬಡ್ಡಿದರ ಲಭ್ಯವಿದೆ. 444 ದಿನಗಳಲ್ಲಿ ಅವಧಿ ಮುಗಿಯುವ ಠೇವಣಿಗಳಿಗೆ ಬ್ಯಾಂಕ್ 7.25% ಬಡ್ಡಿಯನ್ನು ನೀಡುತ್ತಿದೆ.
ಪರಿಷ್ಕೃತ ದರಗಳ ಪ್ರಕಾರ, ಸಾರ್ವಜನಿಕರಿಗೆ 4% ರಿಂದ 7.25% ವರೆಗೆ ಮತ್ತು ಹಿರಿಯ ನಾಗರಿಕರಿಗೆ 4% ರಿಂದ 7.75% ವರೆಗೆ ಬಡ್ಡಿಯನ್ನು ಬ್ಯಾಂಕ್ ನೀಡುತ್ತಿದೆ. ಈ ಹಿಂದೆ ಈ ಠೇವಣಿಗಳಿಗೆ ಬ್ಯಾಂಕ್ ಸಾರ್ವಜನಿಕರಿಗೆ 4% ರಿಂದ 7.40% ವರೆಗೆ ಮತ್ತು ಹಿರಿಯ ನಾಗರಿಕರಿಗೆ 4% ರಿಂದ 7.90% ವರೆಗೆ ಬಡ್ಡಿಯನ್ನು ನೀಡುತ್ತಿತ್ತು.




