ಕೊಚ್ಚಿ: ಇತ್ತೀಚೆಗೆ ಅಮೆರಿಕಾದಿಂದ ಭಾರತಕ್ಕೆ ಕರೆತಂದಿರುವ ಮುಂಬೈ ದಾಳಿ ಪ್ರಕರಣದ ಆರೋಪಿ ತಹವೂರ್ ರಾಣ ಕೊಚ್ಚಿಗೆ ಭೇಟಿ ನೀಡಿರುವ ಮಾಹಿತಿಯ ಹಿನ್ನೆಲೆಯಲ್ಲಿ ಈ ಬಗ್ಗೆ ತನಿಖೆ ನಡೆಸಲು ಎನ್‍ಐಎ ನಿರ್ಧರಿಸಿದೆ. ತಹವೂರ್ ರಾಣನನ್ನು ಸಮಗ್ರ ತನಿಖೆಗೊಳಪಡಿಸಿದರೆ ನಿರ್ಣಾಯಕ ಮಾಹಿತಿ ಲಭಿಸಬಹುದೆಂದು ನಿರೀಕ್ಷೆಯನ್ನು ತನಿಖಾ ತಂಡ ವ್ಯಕ್ತಪಡಿಸಿದೆ.
ಮುಂಬೈ ಭಯೋತ್ಪಾದನಾ ದಾಳಿಯ ಸೂತ್ರಧಾರನೆಂದೇ ಬಿಂಬಿಸಲ್ಪಟ್ಟ ರಾಣಾ 2008 ನವೆಂಬರ್ 26 ರಂದು ಕೊಚ್ಚಿಗೆ ತಲುಪಿದ್ದನೆಂದು ಹೇಳಲಾಗಿದೆ. ಅಂದೇ ಉಗ್ರರ ದಾಳಿ ನಡೆದಿತ್ತು. ಕೊಚ್ಚಿಯ ತಾಜ್ ಹೋಟೆಲ್‍ನಲ್ಲಿ ತಂಗಿದ್ದ ರಾಣ ಕೊಚ್ಚಿನ್ ಪೋರ್ಟ್ ಟ್ರಸ್ಟ್, ಶಿಪ್‍ಯಾರ್ಡ್ ಸಹಿತ ಪ್ರಧಾನ ಸ್ಥಳಗಳನ್ನು ಸಂದರ್ಶಿಸಿದ್ದನೆಂದು ತನಿಖಾ ತಂಡಕ್ಕೆ ಈ ಹಿಂದೆಯೇ ಮಾಹಿತಿ ಲಭಿಸಿತ್ತು. ಅಮೆರಿಕಾದಿಂದ ಪ್ರತ್ಯೇಕ ವಿಮಾನದಲ್ಲಿ ಭಾರತಕ್ಕೆ ತಲುಪಿಸಿದ ರಾಣನನ್ನು ನ್ಯಾಯಾಲಯ 8 ದಿನಗಳ ಕಾಲ ಎನ್‍ಐಎ ಕಸ್ಟಡಿಗೆ ಬಿಟ್ಟುಕೊಟ್ಟಿದೆ.




