ದುಬೈ: ಯೆಮನ್‌ನ ಹೂಥಿ ಬಂಡುಕೋರರ ನಿಯಂತ್ರಣದಲ್ಲಿದ್ದ ರಾಸ್ ಇಸಾ ತೈಲ ಸಂಗ್ರಹ ಬಂದರಿನ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 74 ಮಂದಿ ಮೃತಪಟ್ಟಿದ್ದಾರೆ. 170ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಬಂಡುಕೋರರ ಗುಂಪು ಶುಕ್ರವಾರ ತಿಳಿಸಿದೆ.
ಹೂಥಿ ಗುಂಪು ದಾಳಿಯ ಸ್ಥಳದ ನಿಯಂತ್ರಣವನ್ನು ತೆಗೆದುಕೊಂಡಿದ್ದು, ದಾಳಿಯಲ್ಲಿ ಮೃತಪಟ್ಟವರ ಗ್ರಾಫಿಕ್ ಚಿತ್ರವನ್ನು ಬಿಡುಗಡೆ ಮಾಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬಂಡುಕೋರರ ವಿರುದ್ಧ ಮಾರ್ಚ್ 15ರಿಂದ ಆರಂಭಿಸಿರುವ ದಾಳಿಯಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಅಮೆರಿಕ ಸೇನೆ ಈವರೆಗೆ ಸ್ಪಷ್ಟ ಮಾಹಿತಿ ನೀಡಿಲ್ಲ.
'ಯೆಮೆನ್‌ನ ನಾಗರಿಕರಿಗೆ ಹಾನಿ ಮಾಡುವ ಉದ್ದೇಶ ಇಲ್ಲ. ಇರಾನ್ ಬೆಂಬಲಿತ ಹೂಥಿ ಭಯೋತ್ಪಾದಕರ ಅಕ್ರಮ ಆದಾಯ ಮೂಲವನ್ನು ನಾಶ ಮಾಡುವ ಉದ್ದೇಶದಿಂದ ದಾಳಿ ಮಾಡಲಾಗಿದೆ' ಎಂದು ಅಮೆರಿಕ ಸೇನೆ ಹೇಳಿಕೆಯಲ್ಲಿ ತಿಳಿಸಿದೆ.




