HEALTH TIPS

ಭಯೋತ್ಪಾದನೆ ವಿರುದ್ಧ ಹೋರಾಟ ನಿಲ್ಲುವುದಿಲ್ಲ: ಶಶಿ ತರೂರ್

ನ್ಯೂಯಾರ್ಕ್: 'ನಾವು ಐದು ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದೇವೆ. ನಮ್ಮ ಪಯಣದ ಕೊನೆಯಲ್ಲಿ ಅಮೆರಿಕಕ್ಕೆ ಹಿಂತಿರುಗಲಿದ್ದೇವೆ. ಭಯೋತ್ಪಾದನೆ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ನಿಲ್ಲುವುದು ಎಷ್ಟು ಮುಖ್ಯ ಎಂದು ಜಗತ್ತಿಗೆ ವಿವರಿಸಲು ಸಾಧ್ಯವಾಗಲಿದೆ ಎಂದು ನಾನು ಆಶಿಸುತ್ತೇನೆ.

ಭಯೋತ್ಪಾದನೆ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ಈ ಕೃತ್ಯ ಮುಂದುವರಿದರೆ ಸುಮ್ಮನೆ ಇರುವುದಿಲ್ಲ. ಇದು ಒಗಟ್ಟು ಪ್ರದರ್ಶಿಸುವ ಸಮಯ' ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ಕಾಂಗ್ರೆಸ್ ಸಂಸದ ಶಶಿ ತರೂರ್ ನೇತೃತ್ವದ ಸಂಸದರ ನಿಯೋಗವು ಪಂಚ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದೆ. ಈ ಸಂದರ್ಭದಲ್ಲಿ ನ್ಯೂಯಾರ್ಕ್‌ಗೆ ಬಂದಿಳಿದ ಬಳಿಕ ಕಾನ್ಸುಲೇಟ್‌ನಲ್ಲಿ ನಡೆದ ಸಂವಾದದಲ್ಲಿ ತರೂರ್ ಪ್ರತಿಕ್ರಿಯಿಸಿದ್ದಾರೆ.

ಗಯಾನಾ, ಪನಾಮ, ಕೊಲಂಬಿಯಾ, ಬ್ರೆಜಿಲ್‌ ಹಾಗೂ ಅಮೆರಿಕಕ್ಕೆ ಭೇಟಿ ನೀಡುತ್ತಿರುವ ಸರ್ವಪಕ್ಷ ನಿಯೋಗವನ್ನು ತರೂರ್‌ ಮುನ್ನಡೆಸುತ್ತಿದ್ದಾರೆ.

ನ್ಯೂಯಾರ್ಕ್ ಕಾನ್ಸುಲೇಟ್‌ನಲ್ಲಿ ನಡೆದ ಸಂವಾದದಲ್ಲಿ ಪ್ರತಿಕ್ರಿಯಿಸಿದ ತರೂರ್, 'ಪಾಕ್ ಪ್ರಾಯೋಜಿತ ಭಯೋತ್ಪಾದನೆ ಅಂತ್ಯವಾಗಬೇಕು. ಈ ನಿಟ್ಟಿನಲ್ಲಿ ದೃಢಸಂಕಲ್ಪವನ್ನು ಹೊಂದಿದ್ದೇವೆ. ನಮ್ಮಿಂದಾಗುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದೇವೆ. ಹಲವು ಬಾರಿ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ. ಆದರೆ ಪಾಕಿಸ್ತಾನ ನಿರಾಕರಿಸುತ್ತಲೇ ಬಂದಿದೆ. ಭಯೋತ್ಪಾದನೆಯನ್ನು ಪಾಕ್ ಪೋಷಿಸುತ್ತಲೇ ಬಂದಿದೆ. ಆದರೆ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಮೂಲಕ ಸ್ಪಷ್ಟ ಸಂದೇಶವನ್ನು ರವಾನಿಸಲಾಗಿದೆ' ಎಂದು ಹೇಳಿದ್ದಾರೆ.

'ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ ಭಯೋತ್ಪಾದಕರಿಗೆ ತಕ್ಕ ಶಿಕ್ಷೆಯಾಗಬೇಕು. ಅವರನ್ನು ಸುಮ್ಮನೆ ಬಿಡುವುದಿಲ್ಲ. ಭಯೋತ್ಪಾದನೆಗೆ ಎಲ್ಲಿಂದ ತರಬೇತಿ, ಹಣಕಾಸಿನ ನೆರವು ಸಿಗುತ್ತಿದೆ ಎಂಬುದನ್ನು ನಾವು ಯೋಚಿಸಬೇಕು' ಎಂದು ಹೇಳಿದ್ದಾರೆ.

'ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ನಮಗೆ ಆಸಕ್ತಿ ಇಲ್ಲ. 21ನೇ ಶತಮಾನದಲ್ಲಿ ನಮ್ಮ ಆರ್ಥಿಕತೆಯನ್ನು ಬೆಳೆಸಲು, ಜನರ ಏಳಿಗೆಗಾಗಿ ಪ್ರಯತ್ನಿಸಲು ಇಚ್ಛೆಪಡುತ್ತೇವೆ. ಆದರೆ ಬೇಸರದ ಸಂಗತಿಯೆಂದರೆ ಪಾಕಿಸ್ತಾನ, ಭಾರತದ ಪ್ರದೇಶವನ್ನು ಅತಿಕ್ರಮಿಸಲು ಬಯಸುತ್ತದೆ. ಸಾಂಪ್ರದಾಯಿಕ ವಿಧಾನಗಳ ಮೂಲಕ ಪಡೆಯಲು ಸಾಧ್ಯವಾಗದಿದ್ದರೆ ಭಯೋತ್ಪಾದನೆ ಮೂಲಕ ಆಕ್ರಮಿಸಲು ಬಯಸುತ್ತಿದೆ. ಇದನ್ನು ಖಂಡಿತ ಒಪ್ಪಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

'ನಿಮಗೆ ತಿಳಿದಿರುವಂತೆಯೇ ನಾನು ಸರ್ಕಾರವನ್ನು ಪ್ರತಿನಿಧಿಸುವುದಿಲ್ಲ. ವಿರೋಧ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಆದರೆ ಪಾಕ್ ವಿರುದ್ಧ ಭಾರತ ಕೈಗೊಂಡಿರುವ ಕ್ರಮ ಸರಿಯಾಗಿದೆ ಎಂದು ಹೇಳಲು ಸಂತೋಷವಾಗುತ್ತಿದೆ. ಒಂಬತ್ತು ಭಯೋತ್ಪಾದನೆ ನೆಲೆಗಳ ಮೇಲೆ ನಿರ್ದಿಷ್ಟ ಗುರಿಯ ದಾಳಿ ನಡೆಸಲಾಗಿದೆ' ಎಂದು ಅವರು ವಿವರಿಸಿದ್ದಾರೆ.

ಇದೇ ಸಂದರ್ಭದಲ್ಲಿ 9/11 ಸ್ಮಾರಕಕ್ಕೆ ತೆರಳಿ ಶಶಿ ತರೂರ್ ಹಾಗೂ ಸಂಸದರು ಗೌರವ ಸಲ್ಲಿಸಿದ್ದಾರೆ. 'ಭಯೋತ್ಪಾದನೆಯಿಂದಾಗಿ ಜಗತ್ತಿನೆಲ್ಲೆಡೆಯ ಜನರು ಸಮಾನವಾದ ತೊಂದರೆಯನ್ನು ಎದುರಿಸುತ್ತಿದ್ದಾರೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. 9/11 ಸ್ಮಾರಕದಲ್ಲಿ ನಮನ ಸಲ್ಲಿಸುವ ಮೂಲಕ ಒಗ್ಗಟ್ಟನ್ನು ಸಾರಿದ್ದೇವೆ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries