ಪೆರ್ಲ: ಜಾತಿ, ಕುಲ, ಬೇಧ ಭಾವಗಳನ್ನು ಮರೆತು ಅಖಂಡ ರಾಷ್ಟ್ರ ನಿರ್ಮಾಣಕ್ಕೆ ನಾವೆಲ್ಲರೂ ಸಂಕಲ್ಪ ತೊಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವೇ.ಮೂ. ಚೆನ್ನಕೇಶವ ದೀಕ್ಷಿತ್ ಮತ್ತೂರು ಹೇಳಿದರು. ಅವರು ಪೆರ್ಲ ಸನಿಹದ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ (ಉಳ್ಳಾಲ್ಲಿ) ವಿಷ್ಣುಮೂರ್ತಿ ಕ್ಷೇತ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಆಮಂತ್ರಿತ ಸದಸ್ಯ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು 82 ಸಂವತ್ಸರಗಳನ್ನು ಪೂರೈಸಿರುವ ನಿಟ್ಟಿನಲ್ಲಿ ಲೋಕ ಕಲ್ಯಾಣಾರ್ಥವಾಗಿ ಆಯೋಜಿಸಲಾಗಿದ್ದ ರಾಷ್ಟವಿಜಯ ಯಜ್ಞದ ಅಂಗವಾಘಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರು ರಾಷ್ಟ್ರ ಹಿತಕ್ಕಾಗಿ ತಮ್ಮ ಜೀವನ ಮುಡಿಪಾಗಿರಿಸಿದ್ದಾರೆ ಎಂದರು. ಕೊಂಡೆವೂರು ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ ಭಾರತ ಹಿಂದು ಧರ್ಮ ಆಧಾರಿತ ದೇಶ. ದೇಶದ ಏಕತೆ ಮತ್ತು ಅಖಂಡತೆಗೆ ನಾವು ಕಟಿ ಬದ್ದರಾಗಬೇಕು. ಸಂಸ್ಥೆಗಳು ಸಮಾಜವನ್ನು ಕಟ್ಟಿದರೆ ಸಂಘ ದೇಶವನ್ನು ಕಟ್ಟುವ ಕಾರ್ಯದಲ್ಲಿ ತೊಡಗಿಕೊಂಡಿದೆ.ಎಂದು ತಿಳಿಸಿದರು.ಆರೆಸ್ಸೆಸ್ ಮುಖಂಡ ಸುರೇಶ್ ಜೋಷಿ, ಮಂಗೇಶ್ ಭೇಂಡೆ, ಒ.ಕೆ.ಮೋಹನನ್, ರವೀಂದ್ರ ಜೋಶಿ, ಪ್ರಭಾಕರ ಭಟ್ ಕಲ್ಲಡ್ಕ, ಕೆ.ಕೆ.ಬಲರಾಂ, ಸೀತಾರಾಮ ಕೆದಿಲಾಯ, ವಾಮನ ಶೆಣೈ, ನಿರ್ಮಲ್ ಕುಮಾರ್, ತಿಪ್ಪೆ ಸ್ವಾಮಿ, ಬಿ.ನಾಗರಾಜ್, ದಿನೇಶ್, ಜಗದೀಶ್, ವೆಂಕಟರಮಣ್, ಕೃಷ್ಣ ಪ್ರಸಾದ್ ಬದಿ, ರಾಮಚಂದ್ರ ಭಟ್ ಕೋಟೆ ಮನೆ, ಎ.ಸಿ.ಗೋಪಿನಾಥ್ ಸಹಿತ ಆರ್ ಎಸ್ ಎಸ್ ಮುಖಂಡರು, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪ್ರತಾಪ್ ಸಿಂಹ ನಾಯಕ್, ಕೆ.ಸುರೇಂದ್ರನ್, ಕೆ.ಶ್ರೀಕಾಂತ್, ಎಂ.ಎಲ್.ಅಶ್ವಿನಿ, ರವೀಶ್ ತಂತ್ರಿ ಕುಂಟಾರು, ಭರತ್ ಶೆಟ್ಟಿ, ರಾಜೇಶ್ ನಾಯಕ್, ಹರೀಶ್ ಪೂಂಜಾ, ಸುನಿಲ್ ಕುಮಾರ್ ಕಾರ್ಕಳ, ನಳೀನ್ ಕುಮಾರ್ ಕಟೀಲ್, ಚಿಂತಕ ಚಕ್ರವರ್ತಿ ಸೂಲಿಬೆಲೆ, ಅಂಕಣಕಾರ ದು.ಗು.ಲಕ್ಷ್ಮಣ ಮೊದಲದವರು ಪಾಲ್ಗೊಂಡಿದ್ದರು. ಕಜಂಪಾಡಿ ಸುಬ್ರಹ್ಮಣ್ಯ ಭಟ್-ಶ್ರೀಲಕ್ಷಿ ದಂಪತಿಯನ್ನು ಅಭಿನಂದಿಸಲಾಯಿತು.
ಶೌರಿ ಭಟ್ ಟಿ. ರಾಷ್ಟ್ರ ಗೀತೆ ಹಾಡಿದರು. ರಾಷ್ಟ್ರ ವಿಜಯ ಯಜ್ಞ ಸಮಿತಿ ಪೆರ್ಲ ಗೌರವಾಧ್ಯಕ್ಷ ರಾಜಾರಾಮ ಪೆರ್ಲ ಸ್ವಾಗತಿಸಿದರು. ಲೋಕೇಶ್ ಜೋಡುಕಲ್ಲು ಸಂಘದ ಪ್ರಮುಖರನ್ನು ಪರಿಚಯಿಸಿದರು. ರಾಮಕೃಷ್ಣ ಭಟ್ ಕಜಂಪಾಡಿ ವಂದಿಸಿದರು. ವೇ.ಮೂ. ಶ್ರೀಧರ ಭಟ್ ಸಜಂಗದ್ದೆ ನೇತೃತ್ವದಲ್ಲಿ ಪವಮಾನ ಹೋಮ, ಮಧ್ಯಾಹ್ನ ಯಜ್ಞಗಳ ಪೂರ್ಣಾಹುತಿ, ಮಹಾಪೂಜೆ, ಮಂತ್ರಾಕ್ಷತೆ ನಡೆಯಿತು.


