ಕಾಸರಗೋಡು: ಮುಂಗಾರು ಮಳೆಯನ್ನು ಇದಿರುನೋಡುತ್ತಿದ್ದ ಜಿಲ್ಲೆಯ ಜನತೆಗೆ ಬೇಸಿಗೆ ಮಳೆ ಭಾರೀ ನಾಶ ನಷ್ಟ ತಂದೊಡ್ಡಿದೆ. ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಆರಂಭವಾದ ಮಳೆ ಮಂಗಳವಾರವೂ ಮುಂದುವರಿದಿದ್ದು, ಕಾಸರಗೋಡು ಸೇರಿದಂತೆ ಉತ್ತರ ಕೇರಳದ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಜಿಲ್ಲೆಯ ಜನತೆಗೆ ಏಕಾಏಕಿ ಸುರಿದ ಮಳೆಯಿಂದ ಕೆಲವೆಡೆ ಹಾನಿಗೂ ಕಾರಣವಾಗಿದೆ. ಕೇರಳಾದ್ಯಂತ ಮಳೆ ವ್ಯಾಪಿಸಿದ್ದು, ಷಟ್ಪಥ ಕಾಮಗಾರಿ ನಡೆಯುತ್ತಿರುವ ಬಹುತೇಕ ಕಡೆ ರಸ್ತೆಗಳಿಗೆ ಹಾನಿಯುಂಟಾಗಿದೆ.
ಪೆರಿಯಾ ಕೇಂದ್ರ ವಿಶ್ವವಿದ್ಯಾಲಯದ ಸನಿಹದ ಸರ್ವಿಸ್ ರಸ್ತೆಯಲ್ಲಿ ಭಾರೀ ಮಳೆಯಿಂದಾಗಿ ಖಾಸಗಿ ಬಸ್ ಸರ್ವೀಸ್ ರಸ್ತೆಯ ಮಣ್ಣಿನಲ್ಲಿ ಹೂತುಕೊಂಡಿದೆ. ಬಿರುಸಿನ ಗಾಳಿ ಹಾಗೂ ಮಳೆಯಿಂದ ಕಾಸರಗೋಡು ಕರಂದಕ್ಕಾಡಿನ ಸರ್ವೀಸ್ ರಸ್ತೆಯ ಸನಿಹ ಬೃಹತ್ ಮರವೊಂದು ವಿದ್ಯುತ್ ತಂತಿಯ ಮೇಲೆ ಉರುಳಿ ಬಿದ್ದಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಚೆರ್ಕಳ-ಬದಿಯಡ್ಕ ಅಂತಾರಾಜ್ಯ ಹೆದ್ದಾರಿಯಲ್ಲಿ ಮರವೊಂದು ಉರುಳಿಬಿದ್ದು ಸಂಚಾರ ಅಸ್ತವ್ಯಸ್ತವಾಯಿತು. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಚೆರುವತ್ತೂರು ಮಟ್ಟಲಾಯಿಕುನ್ನು, ವೀರಮಲಕ್ಕುನ್ನು ಮತ್ತು ತೆಕ್ಕಿಲ್ ನಲ್ಲಿ ಭೂಕುಸಿತದ ಭೀತಿ ಎದುರಾಗಿದೆ.
ಕಾಞಂಗಾಡಿನ ಮಾವುಂಗಲ್‍ನ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆ ಕುಸಿದು ಮಾರ್ಗಮಧ್ಯೆ ಬೃಹತ್ ಹೊಂಡ ನಿರ್ಮಾಣವಾಗಿದೆ. ಇದರಿಂದ ಈ ಪ್ರದೇಶದ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವಂತಾಗಿದೆ. ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದ ಮಾವುಂಗಾಲಿನ ಕಲ್ಯಾಣ್ ರಸ್ತೆಯಲ್ಲಿ ಕಾಮಗಾರಿ ಪೂರ್ಣಗೊಂಡ ಸರ್ವೀಸ್ ರಸ್ತೆ ಮಂಗಳವಾರ ಬೆಳಗ್ಗೆ ಕುಸಿದು ಹೊಂಡವುಂಟಾಗಿದೆ.
ಹೆದ್ದಾರಿಯ ಪುಲ್ಲೂರು, ಪೆರಿಯ ಸೇರಿದಂತೆ ಷಟ್ಪಥ ಕಾಮಗಾರಿ ನಡೆಯುವ ಬಹುತೇಕ ಕಡೆ ನೀರು ದಾಸ್ತಾನುಗೊಂಡಿದ್ದರೆ, ಇನ್ನು ಕೆಲವೆಡೆ ಸರ್ವೀಸ್ ರಸ್ತೆ ಬದಿ ಕುಸಿದು ಆಪಾಯಕ್ಕೆ ಆಹ್ವಾನ ಉಂಟಾಗಿದೆ. ಮೊದಲ ಮಳೆಗೇ ರಸ್ತೆ ಕುಸಿಯುತ್ತಿರುವುದರಿಂದ ಮುಂದೆ ಬಿರುಸಿನ ಮಳೆಗೆ ರಸ್ತೆಕಾಮಗಾರಿ ನಡೆಯುತ್ತಿರುವ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಆತಂಕ ಮನೆಮಾಡಿದೆ.
ಕಾಸರಗೋಡು ಜಿಲ್ಲೆ ಸೇರಿದಂತೆ ಮಲಬಾರ್ ಒಳಗೊಂಡ ಕರಾವಳಿ ಭಾಗದಲ್ಲಿ ಮುಂಬರುವ ತಾಸುಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರರಿಗೆ ಕಡಲಿಗೆ ತೆರಳದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಬಿರುಸಿನ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ಪಾಲಿಸುವಂತೆ ಕಾಸರಗೋಡು ಜಿಲ್ಲಾಡಳಿತ ಕಂದಾಯ ಇಲಾಖೆಗೆ ತಿಳಿಸಿದೆ.
ಇಂದು ಸಭೆ:
ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದ ಮಳೆಗಾಲದ ಸಿದ್ಧತೆಗಳ ಅಂಗವಾಗಿ ದುರಂತ ತಪ್ಪಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಹೇಳಿದರು.
ಭೂಕುಸಿತ ಸಾಧ್ಯತೆಯಿರುವ ಮಟ್ಟಲಾಯಿಕುನ್ನು, ವೀರಮಲಕುನ್ನು ಮತ್ತು ಚೆರ್ಕಳ ತೆಕ್ಕಿಲ್ ಪ್ರದೇಶದಲ್ಲಿ ಪಕ್ಕದ ಗೋಡೆಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಭೂಕುಸಿತ ತಡೆಗಟ್ಟಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ರಸ್ತೆ ನಿರ್ಮಾಣ ಗುತ್ತಿಗೆದಾರರು ಕ್ರಮಕೈಗೊಳ್ಳುವರು. ಈ ಪ್ರದೇಶದಲ್ಲಿ ವಿಪತ್ತು ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವನ್ನು ಕೇಳಿಕೊಳ್ಳಲಾಗಿದೆ. ಮೇ 21 ರಂದು ಮಧ್ಯಾಹ್ನ 3ಕ್ಕೆ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಲಿರುವ ಸಭೆಯಲ್ಲಿ ತುರ್ತು ವಿಪತ್ತು ಸಂದರ್ಭಗಳನ್ನು ನಿಭಾಯಿಸುವ ದಾಖಲೆಯನ್ನು ಮಂಡಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.



