ಕಾಸರಗೋಡು: ಮಾರ್ಗದರ್ಶಕ ಮಂಡಲಂ ಕೇರಳ ಘಟಕ ವತಿಯಿಂದ ಹಾಗೂ ಸಾಮಾಜಿಕ, ಸಮುದಾಯಿಕ, ಸಾಂಸ್ಕøತಿಕ, ಆಧ್ಯಾತ್ಮಿಕ ಸಂಘಟನೆಗಳ ಸಹಕಾರದೊಂದಿಗೆ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಧರ್ಮಸಂದೇಶ ಯಾತ್ರೆಯ ಕಾಸರಗೋಡು ಘಟಕದ ಸ್ವಾಗತ ಸಮಿತಿ ರಚನಾ ಸಭೆ ವಿದ್ಯಾನಗರದ ಚಿನ್ಮಯ ಸಿಬಿಸಿ ಸಭಾಂಗಣದಲ್ಲಿ ಜರುಗಿತು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಸಮಾರಂಭ ಉದ್ಘಾಟಿಸಿದರು. ಚಿನ್ಮಯ ಮಿಷನ್ ಕೇರಳ ಘಟಕ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಅಧ್ಯಕ್ಷತೆ ವಹಿಸಿದ್ದರು. ಧರ್ಮ ಸಂದೇಶ ಯಾತ್ರೆ ಕೇರಳ ಘಟಕ ಪ್ರಧಾನ ಕಾರ್ಯದರ್ಶಿ ಸ್ವಾಮಿ ಸತ್‍ಸ್ವರೂಪಾನಂದ ಸರಸ್ವತೀ ಮುಖ್ಯ ಭಾಷಣ ಮಾಡಿ, ಸಾಮಾಜಿಕ ಮೌಲ್ಯಗಳಿಗೆ ಧಕ್ಕೆ, ಕುಟುಂಬ ವ್ಯವಸ್ಥೆಯಲ್ಲಿನ ಶಿಥಿಲತೆ, ಹೆಚ್ಚುತ್ತಿರುವ ಮಾದಕ ದ್ರವ್ಯದ ಬಗ್ಗೆ ಜಾಗೃತಿ, ಧಾರ್ಮಿಕ ಮೌಲ್ಯಗಳ ಉದ್ದೀಪನ ಮುಂತಾದ ಪ್ರಮುಖ ವಿಷಯಗಳೊಂದಿಗೆ ಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಅಮೃತದಾನಂದಮಯೀ ಕಾಸರಗೋಡು ಮಠದ ಬ್ರಹ್ಮಚಾರಿ ಶ್ರೀ ವೇದವೇದ್ಯಾಮೃತ ಚೈತನ್ಯ ಹಾಗೂ ಜಿಲ್ಲೆಯ ಇತರ ಯತಿವರ್ಯರು ಆಶೀರ್ವಚನ ನೀಡಿದರು. ಅಕ್ಟೋಬರ್ 7ರಂದು ಯಾಥ್ರೆ ಕಾಸರಗೋಡಿನಿಂದ ಆರಂಭಗೊಳ್ಳಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ ಮಧುಸೂಧನ್ ಆಯರ್ ಅವರು ಅಧ್ಯಕ್ಷ, ವಿವಿಧ ಸಾಮಾಜಿಕ, ಸಮುದಾಯ ಸಂಘಟನೆಎಗಳ ಪದಾಧಿಕಾರಿಗಳನ್ನೊಳಗೊಂಡ 501ಮಂದಿ ಸದಸ್ಯರುಳ್ಳ ಸಮಿತಿ ರಚಿಸಲಾಯಿತು.


