ಬದಿಯಡ್ಕ: ಕ್ಷೇತ್ರಗಳ ಜೀರ್ಣೋದ್ಧಾರ ಮುಂತಾದ ದೈವಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ದೈವ ನಿಶ್ಚಯ ಇದ್ದರೆ ಮಾತ್ರ ಸಾಧ್ಯ. ಭಗವಂತನ ಕೃಪೆ ಇದ್ದರೆ ಮಾತ್ರ ಇಂಥ ಕಾರ್ಯಕ್ರಮಗಳಲ್ಲಿ ಕೈ ಕೈಜೋಡಿಸಲು ನಮಗೆ ಆಸ್ಪದ ಉಂಟಾಗುವುದು. ದೇವಸ್ಥಾನಗಳಲ್ಲಿ ನಡೆಯುವಂತಹ ನವೀಕರಣ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಮ್ಮ ಶಕ್ತಿ ಮೀರಿ ಧನಸಂಪತ್ತಿನ ಕೊಡುಗೆ ಮತ್ತು ನಮ್ಮ ಶ್ರಮವನ್ನು ಕೊಟ್ಟು ಪಾಲ್ಗೊಳ್ಳುವುದರಿಂದ ಭಕ್ತ ಜನರ ಮುಂದಿನ ಪೀಳಿಗೆಗೂ ಕೂಡ ಅದರ ಸತ್ ಫಲವು ದೊರಕುವುದು ಎಂದು ಕುಂಬ್ಡಾಜೆ ಗ್ರಾಮದ ಪಾತೇರಿಯಲ್ಲಿರುವ ಶ್ರೀ ಶಂಕರನಾರಾಯಣ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಬದಿಯಡ್ಕದ ಧಾರ್ಮಿಕ ಮುಂದಾಳು ಹಾಗೂ ಖ್ಯಾತ ಉದ್ಯಮಿ ವಸಂತ ಪೈ ಅವರು ಹೇಳಿದರು.
ಅವರು ಪಾತೇರಿ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜುಲೈ 6 ರಂದು ಶ್ರೀ ಕ್ಷೇತ್ರದಲ್ಲಿ ಮುಂದೆ ನಡೆಯಬೇಕಾದ ಜೀರ್ಣೋದ್ಧಾರ ಕಾರ್ಯಗಳ ಮಾಹಿತಿ ಹಾಗೂ ಧನಸಂಗ್ರಹಕ್ಕಾಗಿರುವ ವಿಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಕ್ಷೇತ್ರದ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಧಾರ್ಮಿಕ ಮುಂದಾಳು ಸಂಜೀವ ಶೆಟ್ಟಿ ಮೊಟ್ಟೆಕುಂಜ ಅವರು ಶ್ರೀ ಕ್ಷೇತ್ರದ ನವೀಕರಣ ಕೆಲಸಗಳನ್ನು ಅತ್ಯಂತ ವೇಗವಾಗಿ ಮುಗಿಸಿ ಬ್ರಹ್ಮಕಲಶೋತ್ಸವವನ್ನು ನಡೆಸಲುಬೇಕಾಗಿ ಊರ ಪರವೂರ ಭಕ್ತ ಜನರೆಲ್ಲರೂ ಕೂಡ ಕೈಜೋಡಿಸಬೇಕು ಎಂದು ಕರೆಕೊಟ್ಟರು. ಮಲ್ಲ ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅನುವಂಶಿಕ ಮೊಕ್ತೇಸರ ಸತ್ಯನಾರಾಯಣ ಭಟ್ ಆನೆಮಜಲು ಮುಖ್ಯ ಅತಿಥಿಗಳಾಗಿ ಮಾತನಾಡಿ ದೇವಸ್ಥಾನಗಳ ಜೀರ್ಣೋದ್ಧಾರ ವನ್ನು ನಡೆಸುವುದರಿಂದ ಭಕ್ತರಿಗೆ ಸುಭಿಕ್ಷವುಂಟಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೀರ್ಚಾಲಿನ ಸಾಮಾಜಿಕ ಧುರೀಣ ಗಣೇಶ್ ಕೃಷ್ಣ ಅಳಕ್ಕೆ, ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಹಾಗೂ ಪ್ರಸಿದ್ಧ ಉದ್ಯಮಿ ಶಂಕರನಾರಾಯಣ ಮಯ್ಯ, ಕ್ಷೇತ್ರದ ಆನುವಂಶಿಕ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಪಾವೂರು, ಅರ್ಚಕ ಶಿವಶಂಕರ ಭಟ್ ಪಾತೇರಿ, ಮಾತೃ ಮಂಡಳಿಯ ಅಧ್ಯಕ್ಷೆ ವಸಂತಿ ಕೇಕೆಮೂಲೆ, ರವಿಶಂಕರ ಉಪ್ಪಂಗಳ ಪುತ್ತೂರು, ಸಮಿತಿಯ ಕಾರ್ಯಾಧ್ಯಕ್ಷ ಸತ್ಯಮೂರ್ತಿ ಅಮ್ಮಣ್ಣಾಯ ಪಾವೂರು ಮುಂತಾದ ಧಾರ್ಮಿಕ ಮುಂದಾಳುಗಳು ಹಾಗೂ ಊರಪರವೂರ ಹಲವಾರು ಭಕ್ತ ಜನರು ಭಾಗವಹಿಸಿದ್ದರು.
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹರಿನಾರಾಯಣ ಶಿರಂತಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾರಾಯಣ ಗೋಸಾಡ ಸ್ವಾಗತಿಸಿ, ಗಂಗಾಧರ ಮಾಸ್ತರ್ ಮವ್ವಾರು ವಂದಿಸಿದರು. ಕುಮಾರಿ ಚೈತನ್ಯ ಲಕ್ಷ್ಮಿ ಪಾತೇರಿ ಪ್ರಾರ್ಥನಾ ಗೀತೆಯನ್ನು ಹಾಡಿದರು. ರಮೇಶ್ ಶರ್ಮ ಕುರುಮುಜ್ಜಿ ಕಾರ್ಯಕ್ರಮ ನಿರೂಪಿಸಿದರು.
ವಿಜ್ಞಾಪನಾ ಪತ್ರ ಬಿಡುಗಡೆಗೂ ಮುನ್ನ ಪಾತೇರಿ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

.jpg)
