ಕಾಸರಗೋಡು: ಜಿಲ್ಲೆಯ ನಾನಾ ಕಡೆ ಬಿರುಸಿನ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಚಂದ್ರಗಿರಿ ನಡಕ್ಕಾಲ್ ಎಂಬಲ್ಲಿ ಮಿಥೇಶ್ ಎಂಬವರ ಮನೆ ಹಿಂಭಾಗಕ್ಕೆ ಬೃಹತ್ ಬಂಡೆಕಲ್ಲು ಕುಸಿದುಬಿದ್ದ ಪರಿಣಾಂ ಮನೆಗೆ ಹಾನಿ ಸಂಭವಿಸಿದೆ. ಮನೆಯೊಳಗಿದ್ದವರು ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ. ಮನೆಸನಿಹ ಕುಸಿತದ ಭೀತಿಯಲ್ಲಿದ್ದ ಬಂಡೆಕಲ್ಲು ತೆರವಿಗಾಘಿ ಕಳ್ನಾಡು ಗ್ರಾಮಾಧಿಕಾರಿ ಕಚೇರಿಗೆ ದೂರು ನೀಡಿದ್ದರೂ, ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರೆಂದು ಮಿಥೇಶ್ ದೂರಿದ್ದಾರೆ.
ಮಂಜೇಶ್ವರ ತಾಲೂಕಿನ ವರ್ಕಾಡಿ ಕೊಡ್ಲಮೊಗರು ಕೋಡಿಜಾಲು ಎಂಬಲ್ಲಿ ದಿ. ಯುವರಾಜ ಶೆಟ್ಟಿ ಎಂಬವರ ಮನೆಯ ಮೇಲೆ ಬೃಹತ್ ಮರ ಬಿದ್ದು ಹಾನಿಗೀಡಾಗಿದೆ. ಮನೆ ಹಿಂಬದಿಯ ಗುಡ್ಡ ಕುಸಿತಕ್ಕೀಡಾಗಿದ್ದು, ಮನೆಗೆ ಅಪಾಯ ಸಂಭವಿಸುವ ಸಾಧ್ಯತೆಯಿದೆ.
ಬುಧವಾರ ರಾತ್ರಿ ದುರಂತ ಸಂಭವಿಸಿದ್ದು, ಮನೆಯಲ್ಲಿ ಯುವರಾಜ ಶೆಟ್ಟಿ ಅವರ ಪತ್ನಿ ಶಶಿಕಲಾ ಮತ್ತು ಪುತ್ರಿ ಮಾತ್ರ ವಾಸಿಸುತ್ತಿದ್ದು ಮರ ಕುಸಿಯುತ್ತಿರುವ ಶಬ್ದ ಕೇಳುತ್ತಿದ್ದಂತೆ ಇಬ್ಬರೂ ಹೊರಕ್ಕೆ ಧಾವಿಸಿರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
PHOTOS: ಬಿರುಸಿನ ಮಳೆಗೆ ಕೊಡ್ಲಮೊಗರು ಕೋಡಿಜಾಲು ಎಂಬಲ್ಲಿ ಶಶಿಕಲಾ ಎಂಬವರ ಮನೆ ಮೇಲೆ ಭಾರಿ ಗಾತ್ರದ ಮರ ಉರುಳಿ ಹಾನಿ ಸಂಭವಿಸಿದೆ.
ಕೊಡ್ಲಮೊಗರು ಕೋಡಿಜಾಲ್ ಪ್ರದೇಶದಲ್ಲಿ ಭಾರೀ ಭೂಕುಸಿತದಿಂದ ಈ ಪ್ರದೇಶದ ಜನತೆ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.



