ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜೇಶ್ವರ ಗೋವಿಂದಪೈ ಸ್ಮಾರಕ ಕಾಲೇಜು ಸನಿಹದ ರಸ್ತೆಯಲ್ಲಿ ಯುವಕನನ್ನು ಅಪಹರಿಸಲು ಯತ್ನಿಸಿದೆ. ತಂಡವನ್ನು ಪೊಲೀಸರು ಹಿಂಬಾಲಿಸುತ್ತಿದ್ದಂತೆ ಯುವಕನನ್ನು ಹಾಗೂ ಕಾರನ್ನು ಬಿಟ್ಟು ತಂಡ ಪರಾರಿಯಾಗಿದೆ. ಪ್ರಕರಣದ ಬಗ್ಗೆ ಕೇಸು ದಾಖಲಿಸಿಕೊಂಡಿರುವ ಪೊಲೀಸರು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಮಂಜೇಶ್ವರ ಕುಂಜತ್ತೂರು ಗೇರುಕಟ್ಟೆ ನಿವಾಸಿ, ಅಬೂಬಕ್ಕರ್ ಸಿದ್ದೀಕ್ ಯಾನೆ ಸದ್ದಾಂ(32)ಅಪಹರಣಕ್ಕೀಡಾದ ಯುವಕ. ಬುಧವಾರ ರಾತ್ರಿ ಸ್ನೇಹಿತರ ಜತೆ ಮಾತನಾಡುತ್ತಿದ್ದ ಅಬೂಬಕ್ಕರ್‍ಸಿದ್ದೀಕ್‍ನನ್ನು ಕಾರಲ್ಲಿ ಆಗಮಿಸಿದ ತಂಡವೊಂದು ಹಿಂಬಾಲಿಸಿ ಸೆರೆಹಿಡಿದು ಕಾರಿನಲ್ಲಿ ಹಾಕಿ ಕಾಸರಗೋಡಿನತ್ತ ಪರಾರಿಯಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಮಂಜೇಶ್ವರ ಠಾಣೆ ಇನ್ಸ್‍ಪೆಕ್ಟರ್ ಇ.ಅನೂಪ್‍ಕುಮಾರ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ, ನಾಯಮರ್‍ಮೂಲೆಯಿಂದ ಕಾರು ಹಾಗೂ ಅಬೂಬಕ್ಕರ್‍ಸಿದ್ದೀಕ್‍ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ತಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಮನಗಂಡ ಅಪಹರಣಕಾರರ ತಂಡ ಕಾರು ಹಾಗೂ ಯುವಕನನ್ನು ಅರ್ಧದಲ್ಲಿ ಬಿಟ್ಟು ಪರಾರಿಯಾಗಿತ್ತೆನ್ನಲಾಗಿದೆ.

