ಕುಂಬಳೆ: ಜಂಟಿ ಕಾರ್ಮಿಕ ಸಂಘಟನೆ ಬುಧವಾರ ಆಹ್ವಾನ ನೀಡಿದ್ದ ರಾಷ್ಟ್ರೀಯ ಮುಷ್ಕರ ಮರೆಯಲ್ಲಿ ವಾಹನಗಳಿಗೆ ತಡೆಯೊಡ್ಡಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಸಿಪಿಎಂ ಮುಖಂಡ ಸೇರಿದಂತೆ ಮೂವರನ್ನು ಕುಂಬಳೆ ಠಾನೆ ಪೊಲೀಸರು ಬಂಧಿಸಿದ್ದಾರೆ. ಸಿಪಿಎಂ ಸ್ಥಳೀಯ ಸಮಿತಿ ಕಾರ್ಯದರ್ಶಿ ಸಂತೋಷ್‍ಕುಮಾರ್, ಬಾಡೂರು ಶೇಣಿ ನಿವಾಸಿ ಬಿನೀಶ್ ಪಿ.ಎಂ ಹಾಗೂ ಮುಗು ಪಳ್ಳ ನಿವಾಸಿ ಮಧುಸೂದನ ಬಂಧಿತರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಸೀತಾಂಗೋಳಿ ಪೇಟೆಯಲ್ಲಿ ಮುಷ್ಕರನಿರತರು ವಾಹನಗಳಿಗೆ ತಡೆಯೊಡ್ಡಿ ಸಂಘರ್ಷಾವಸ್ಥೆ ಸೃಷ್ಟಿಸುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕುಂಬಳೆ ಹಾಗೂ ಬದಿಯಡ್ಕ ಠಾಣೆ ಪೊಲೀಸರು ಸ್ಥಳಕ್ಕಾಗಮಿಸುತ್ತಿದ್ದಂತೆ ಕುಂಬಳೆ ಠಾಣೆ ಪೊಲೀಸರಾದ ಬಾಬುರಾಜ್ ಹಾಗೂ ಜೆಬಿನ್ ಎಂಬವರ ಮೇಲೆ ಹಲ್ಲೆಗೈದು ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಗಾಯಾಳು ಪೊಲೀಸರು ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದರು.

