ಪೆರ್ಲ: ಇಲ್ಲಿನ ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ವ್ಯವಸ್ಥಾಪಕ ಹೃಷಿಕೇಶ್ ವಿ.ಎಸ್ ಧ್ವಜಾರೋಹಣ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಕಾರ್ತಿಕ್ ಶಾಸ್ತ್ರಿ ಖಂಡೇರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪೆರ್ಲ ಸತ್ಯನಾರಾಯಣ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ರಾಜೇಂದ್ರ ಬಜಕೂಡ್ಲು ಮುಖ್ಯ ಅತಿಥಿಯಾಗಿ ಭಾಗವಹಿಸಿ ನಮ್ಮ ಸ್ವಾತಂತ್ರ್ಯ ಇತರರ ಸ್ವಾತಂತ್ರ್ಯಕ್ಕೆ ಧಕ್ಕೆ ತರದಂತೆ ನಮ್ಮನ್ನು ನಾವು ನಿಯಂತ್ರಿಸಿ ಭವ್ಯ ಭಾರತದ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾಗುವ ಎಂದರು.
ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಶಾಲಾ ಹಳೆ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಜೊತೆಗೆ ಕಳೆದ ಸಾಲಿನ ಎಲ್ .ಎಸ್.ಎಸ್ ಮತ್ತು ಯು.ಎಸ್.ಎಸ್ ಸ್ಕಾಲರ್ಶಿಪ್ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಶಾಲೆಯಲ್ಲಿ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಹೆತ್ತವರ ಹಸ್ತ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಮುಖ್ಯಶಿಕ್ಷಕಿ ಗೀತಾಕುಮಾರಿ ಸ್ವಾಗತಿಸಿ, ಹಿರಿಯ ಶಿಕ್ಷಕ ವೆಂಕಟ ವಿದ್ಯಾಸಾಗರ್ ವಂದಿಸಿದರು. ಶಿಕ್ಷಕ ಸಚ್ಚಿದಾನಂದ ಮೊಗೇರು ಕಾರ್ಯಕ್ರಮ ನಿರೂಪಿಸಿದರು. ಮಾತೃ ಸಂಘದ ಅಧ್ಯಕ್ಷೆ ಗಾಯತ್ರಿ, ಗ್ರಾ.ಪಂ. ಸದಸ್ಯ ರಾಮಚಂದ್ರ ಎಂ, ನಿವೃತ್ತ ಮುಖ್ಯಶಿಕ್ಷಕ ಕೆ.ವೈ.ಸುಬ್ರಹ್ಮಣ್ಯ ಭಟ್, ರಕ್ಷಕರು, ದೇಶಾಭಿಮಾನಿಗಳು, ಶಿಕ್ಷಕರು, ಸಿಬ್ಬಂದಿ ವರ್ಗದವರು ಮತ್ತು ಮಕ್ಕಳು ಉಪಸ್ಥಿತರಿದ್ದರು.

.jpg)
.jpg)
