ಕಾಸರಗೋಡು: ನಿವೃತ್ತ ಸರ್ಕಾರಿ ಅಧಿಕಾರಿ ಉದುಮ ಆರಾಟುಕಡವು ನಿವಾಸಿ ಬಿ.ಟಿ ಜಯರಾಮ್ ಅವರು ದೀರ್ಘ ಕಾಲದ ಪರಿಶ್ರಮದೊಂದಿಗೆ ರಚಿಸಿರುವ ಮಲಯಾಳ-ಕನ್ನಡ ಶಬ್ದಕೋಶದ ಬೃಹತ್ ಗ್ರಂಥದ ಬಿಡುಗಡೆ ಸಮಾರಂಭ ಕಾಸರಗೋಡಿನ ನಗರ ಸಭಾ ಸಮ್ಮೇಳನ ಸಭಾಂಗಣದಲ್ಲಿ ನಡೆಯಿತು. ಕೇರಳ ಭಾಷಾ ಸಂಸ್ಥೆ ಪ್ರಕಟಿಸಿದ ಸಮಗ್ರ ಕನ್ನಡ-ಮಲಯಾಳಂ ನಿಘಂಟನ್ನು ಪ್ರಕಟಿಸಿದೆ.
ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಕನ್ನಡ ಭಾಷೆ ಅಭಿವೃದ್ಧಿ ಹೊಂದುತ್ತಿರುವಂತೆ ಕನ್ನಡ-ಮಲಯಾಳಂ ನಿಘಂಟು ಪ್ರಸ್ತುತತೆಯನ್ನು ಪಡೆಯುತ್ತಿದೆ, ಎಲ್ಲಾ ಭಾಷೆಗಳು ಏಕೀಕೃತ ರೂಪವನ್ನು ಹೊಂದಿವೆ ಮತ್ತು ಮಲಯಾಳ, ತುಳು ಮತ್ತು ಕನ್ನಡ ಭಾಷೆಗಳ ಮಧ್ಯೆ ಪರಸ್ಪರ ಸಂಬಂಧ ಹೊಂದಿವೆ. ಕನ್ನಡ ಭಾಷೆಯ ಅಳ, ವಿಸ್ತಾರದ ಬಗ್ಗೆ ಮಲಯಾಳ ಭಾಷಿಗರಿಗೂ ತಿಳಿದುಕೊಳ್ಳುವ ನಿಟ್ಟಿನಲ್ಲಿ ಕನ್ನಡ-ಮಲಯಾಳ ಭಾಷಾ ನಿಘಂಟು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಶಾಸಕ ಇ.ಚಂದ್ರಶೇಖರನ್ ತಾರಾನಾಥ ಗಟ್ಟಿ ಅವರಿಂದ ಪುಸ್ತಕ ಸ್ವೀಕರಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು
ಸಂಸ್ಥೆಯ ನಿರ್ದೇಶಕ ಡಾ. ಸತ್ಯನ್ ಎಂ. ಪ್ರಾಸ್ತಾವಿಕ ಭಾಷಣ ಮಾಡಿದರು. ಲೇಖಕಿ ಮತ್ತು ಅನುವಾದಕಿ ಡಾ. ಮೀನಾಕ್ಷಿ ರಾಮಚಂದ್ರನ್ ಪುಸ್ತಕ ಪರಿಚಯ ಮಾಡಿದರು. ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ, ಕೇಂದ್ರ ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಅನುವಾದಕ ಕೆ.ವಿ.ಕುಮಾರನ್ ಮತ್ತು ನಿಘಂಟು ರಚನಾಕಾರ ಕಾಸರಗೋಡು ಜಿಲ್ಲಾ ನಿವೃತ್ತ ಮಾಹಿತಿ ಅಧಿಕಾರಿ ಬಿ.ಟಿ.ಜಯರಾಮ್ ಉಪಸ್ಥಿತರಿದ್ದರು. ಕೇರಳ ಭಾಷಾ ಸಂಸ್ಥೆಯ ಸಂಶೋಧನಾ ಅಧಿಕಾರಿ ಕೆ.ಆರ್.ಸರಿತಾ ಕುಮಾರಿ ಸ್ವಾಗತಿಸಿದರು. ಕೇರಳ ಭಾಷಾ ಸಂಸ್ಥೆ ಪಿಆರ್‍ಒ ರಫಿ ಪೂಕೋಮ್ ವಂದಿಸಿದರು.
1800 ರೂ. ಬೆಲೆಯ ಈ ನಿಘಂಟನ್ನು ಕಾಸರಗೋಡು ನಿವಾಸಿಗಳು ಲೇಖಕರಿಂದ ನೇರವಾಗಿ, ಕಣ್ಣೂರು ಸೇರಿದಂತೆ ಸಂಸ್ಥೆಯ ಪುಸ್ತಕ ಮಳಿಗೆಗಳಿಂದ ಮತ್ತು ಆನ್‍ಲೈನ್‍ನಲ್ಲಿ ಖರೀದಿಸಬಹುದಾಗಿದೆ. ಆರು ವರ್ಷಗಳ ಪ್ರಯತ್ನದ ಫಲವಾಗಿ ಇದನ್ನು ಸಿದ್ಧಪಡಿಸಲಾಗಿದ್ದು, ನಿಘಂಟಿನಲ್ಲಿ ಕನ್ನಡ ಪದಗಳ ಉಚ್ಚಾರಣೆಯನ್ನು ಮಲಯಾಳಂ ಲಿಪಿಯಲ್ಲಿ ಬರೆಯಲಾಗಿದೆ. ಪ್ರತಿಯೊಂದು ಪದದ ವಿವಿಧ ಅರ್ಥಗಳನ್ನು ಮಲಯಾಳಿಗಳಿಗೆ, ವಿಶೇಷವಾಗಿ ಕಾಸರಗೋಡಿನ ಜನರಿಗೆ ಅರ್ಥವಾಗುವ ರೀತಿಯಲ್ಲಿ ಸ್ಥಳೀಯ ಶೈಲಿಯಲ್ಲಿ ಭಾಷಾಂತರ ಮಾಡಲಾಗಿದೆ.


