ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಿಕುಳಂನ ಬೀಗ ಹಾಕಲಾಗಿದ್ದ ಮನೆಯೊಳಗೆ ಅತ್ಯಪೂರ್ವ ಪ್ರಾಚೀನ ವಸ್ತುಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ರಹಸ್ಯ ಮಾಹಿತಿಯನ್ವಯ ಬೇಕಲ ಠಾಣೆ ಇನ್ಸ್‍ಪೆಕ್ಟರ್ ಎಂ.ವಿ ಶ್ರೀದಾಸ್, ಎಸ್.ಐ ಸವ್ಯಸಾಚಿ ಅವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪ್ರಾಚ್ಯವಸ್ತುಗಳ ಸಂಗ್ರಹ ಪತ್ತೆಹಚ್ಚಲಾಗಿದೆ. ಕಂಚಿನ ಪಾತ್ರೆಗಳು, ಅಪೂರ್ವ ಕಾಲ್ಗೆಜ್ಜೆಗಳು, ಖಡ್ಗ ಇದರಲ್ಲಿ ಒಳಗೊಂಡಿದೆ. ಕೆಲವು ಸಾಮಗ್ರಿಗಳಲ್ಲಿ ಅರಬಿಕ್ ಅಕ್ಷರಗಳು ಕಂಡುಬಂದಿದೆ. ಮೈಸೂರು ಅರಮನೆಯಿಂದ ಸಾಗಿಸಿ ತಂದಿರುವುದೆನ್ನಲಾದ ಖಡ್ಗ ಇದಾಗಿದೆ ಎಂದೂ ಸಂಶಯಿಸಲಾಗಿದೆ. ಕೊಠಡಿ ತಪಾಸಣೆ ಮಧ್ಯೆ ಹಾವು ಪ್ರತ್ಯಕ್ಷಗೊಂಡಿದ್ದು, ಇದರಿಂದ ಕೊಠಡಿ ಬಾಗಿಲು ತೆರೆಯದೆ ಹಲವು ಸಮಯವಾಗಿರಬೇಕೆಂದೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ಕೊಠಡಿಗೆ ಪೊಲೀಸರು ಬೀಗಜಡಿದು ಮೊಹರು ಹಾಕಿದ್ದಾರೆ. ಈ ಬಗ್ಗೆ ಪ್ರಾಚ್ಯವಸ್ತು ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅವರ ಮಾರ್ಗದರ್ಶನದ ಮೂಲಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

