ನವದೆಹಲಿ: ಪಲಿಯೆಕ್ಕರ ಟೋಲ್ ಸಂಗ್ರಹ ಸ್ಥಗಿತಗೊಳಿಸುವುದರ ವಿರುದ್ಧ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆ ಕಂಪನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಹೈಕೋರ್ಟ್‍ನ ಮಧ್ಯಂತರ ಆದೇಶದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಜನರ ಸಂಕಷ್ಟದ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಪಲಿಯೆಕ್ಕರ ಟೋಲ್ ಪ್ಲಾಜಾದಲ್ಲಿ ನಾಲ್ಕು ವಾರಗಳ ಕಾಲ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕೆಂಬ ಹೈಕೋರ್ಟ್ ತೀರ್ಪಿನ ವಿರುದ್ಧ ರಾ.ಹೆದ್ದಾರಿ ಪ್ರಾಧಿಕಾರ ಮೇಲ್ಮನವಿ ಸಲ್ಲಿಸಿತ್ತು. ರಸ್ತೆಯ ಸ್ಥಿತಿಯನ್ನು ಶೋಚನೀಯ ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಟೀಕಿಸಿತ್ತು. ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರು, ಸೋಮವಾರ 12 ಗಂಟೆಗಳ ಸಂಚಾರ ದಟ್ಟಣೆ ಉಂಟಾಗಿದ್ದು, ಒಂದು ಗಂಟೆ ತೆಗೆದುಕೊಳ್ಳಬೇಕಾದ ದೂರವನ್ನು ಕ್ರಮಿಸಲು 11 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೇಳಿದರು. ಕೆಟ್ಟ ರಸ್ತೆಯಲ್ಲಿ ಟೋಲ್ ಏಕೆ ವಿಧಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಳಬೇಕಾಯಿತು.
ಮಳೆಗಾಲದ ಕಾರಣ ನಿರ್ವಹಣೆ ಮಾಡಲಾಗಿಲ್ಲ ಎಂದು ಕೇಂದ್ರ ವಿವರಿಸಿತು. ಟೋಲ್ ಎಷ್ಟು ಎಂದು ನ್ಯಾಯಾಲಯ ಕೇಳಿತು. ಅರ್ಜಿದಾರರು ಟೋಲ್ ಶುಲ್ಕ 150 ರೂ. ಎಂದು ತಿಳಿಸಿದಾಗ, ಮುಖ್ಯ ನ್ಯಾಯಾಧೀಶರು ಇಷ್ಟೊಂದು ಹಣ ಏಕೆ ವಿಧಿಸುತ್ತಿದ್ದೀರಿ ಎಂದು ಕೇಳಿದರು.
ಸಮಸ್ಯೆ ಇದ್ದರೆ, ಟೋಲ್ ಸಂಗ್ರಹವನ್ನು ನಿಲ್ಲಿಸುವುದು ಪರಿಹಾರವಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿತು. ಸಮಸ್ಯೆಯನ್ನು ಪರಿಹರಿಸಲು ಪಿಎಸ್‍ಟಿ ಎಂಜಿನಿಯರಿಂಗ್ ಕಂಪನಿಗೆ ಉಪಗುತ್ತಿಗೆ ನೀಡಿರುವುದಾಗಿ ಮುಖ್ಯ ಗುತ್ತಿಗೆದಾರರು ಹೇಳಿದರು. ಜವಾಬ್ದಾರಿ ಉಪಗುತ್ತಿಗೆದಾರರ ಮೇಲಿದೆ ಎಂದು ಮುಖ್ಯ ಗುತ್ತಿಗೆದಾರರು ವಾದಿಸಿದರು.
ಆದರೆ ಈ ಎಲ್ಲಾ ವಾದಗಳನ್ನೂ ತಿರಸ್ಕರಿಸಿದ ಸುಪ್ರೀಂ ಕೇರಳ ಹೈಕೋರ್ಟಿನ ತೀರ್ಪನ್ನು ಎತ್ತಿಹಿಡಿದು ಪ್ರಾಧಿಕಾರವನ್ನು ಹಿಗ್ಗಾಮುಗ್ಗ ಜಾಡಿಸಿತು.

