ಮುಳ್ಳೇರಿಯ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಕಾಸರಗೋಡು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಂಟಿ ಆಶ್ರಯದಲ್ಲಿ ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಮಾಹಿತಿ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಹಮ್ಮಿಕೊಳ್ಳಲಾಯಿತು.
ತಾಲೂಕು ಕಾರ್ಯಕ್ರಮ ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ ಉದ್ಘಾಟಿಸಿ, ಮಕ್ಕಳು ಮಾದಕ ವಸ್ತುಗಳಿಗೆ ಬಲಿಯಾಗಬಾರದು. ಎಳೆವೆಯಿಂದಲೇ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಇರಬೇಕೆಂಬ ಉದ್ದೇಶದಿಂದ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆ ಶಾಲೆಗಳಲ್ಲಿ ಮಕ್ಕಳಿಗೆ ಇದರ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಆಮಿಷಗಳಿಗೆ ಬಲಿಯಾಗಬಾರದು ಎಂದು ತಿಳಿಸಿದರು.
ನಿವೃತ್ತ ಉಪ ತಹಶೀಲ್ದಾರ್ ನಾರಾಯಣ ಗೋಸಾಡ ಮಾಹಿತಿ ನೀಡಿ, ಅತಿಯಾದ ಮೊಬೈಲ್ ಬಳಕೆ, ಅತಿಯಾದ ಸಾಮಾಜಿಕ ಜಾಲ ತಾಣಗಳ ಬಳಕೆ ವಿದ್ಯಾರ್ಥಿಗಳ ಕಲಿಕೆಯ ಶ್ರದ್ಧೆಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ವಿದ್ಯಾರ್ಥಿಗಳು ಬೀಡಿ ಸಿಗರೇಟು ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಬಾರದು. ಆಧುನಿಕ ಜೀವನ ಶೈಲಿಯಲ್ಲಿ ಹೊಸ ಹೊಸ ಕಾಯಿಲೆಗಳು ಬರುತ್ತಿದ್ದು ಇದಕ್ಕೆ ದುಶ್ಚಟಗಳು ಕಾರಣವಾಗಿದೆ ಎಂದು ತಿಳಿಸಿದರು.
ವ್ಯಾಪಾರಿ ಘಟಕ ಅಧ್ಯಕ್ಷ ಗಣೇಶ್ ವತ್ಸ ಅಧ್ಯಕ್ಷತೆ ವಹಿಸಿದ್ದರು. ಸೇವಾ ಪ್ರತಿನಿಧಿ ರಾಜೇಶ್ವರಿ ಉಪಸ್ಥಿತರಿದ್ದರು. ಮೇಲ್ವಿಚಾರಕ ಸುರೇಶ್ ಸ್ವಾಗತಿಸಿ, ವಲಯ ಅಧ್ಯಕ್ಷ ಸುರೇಶ್ ಯಾದವ್ ವಂದಿಸಿದರು. ಶಿಕ್ಷಕ ವೇಣುಗೋಪಾಲ್ ನಿರ್ವಹಿಸಿದರು.




.jpg)
