ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದಲ್ಲಿಅರವಣ ಪಾಯಸ ವಿತರಣೆಯಲ್ಲಿ ದೇವಸ್ವಂ ಮಂಡಳಿ ಕಟ್ಟುನಿಟ್ಟಿನ ನಿಯಂತ್ರಣ ಹೇರಿದೆ. ಪ್ರತಿಯೊಬ್ಬನಿಗೆ ಗರಿಷ್ಠ 20ಅರವಣ ಪಾಯಸ ಡಬ್ಬೆ ಮಾತ್ರ ವಿತರಿಸಲಾಗುವುದು. ಅರವಣ ಪಾಯಸ ಡಬ್ಬೆ ತುಂಬುವ ಬಾಕ್ಸ್‍ಗಳ ಕೊರತೆ ಹಿನ್ನೆಲೆಯಲ್ಲಿ ನಿಯಂತ್ರಣ ಹೇರಿರುವುದಾಗಿ ದೇವಸ್ವಂ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಅರವಣಪಾಯಸ ವಿತರಣಾ ಕೌಂಟರ್ ಎದುರು ಫಲಕಗಳನ್ನೂ ಅಳವಡಿಸಲಾಗಿದೆ. ಇತರ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯ ಅರವಣಪಾಯಸ ಡಬ್ಬೆ ಖರೀದಿಸುತ್ತಿದ್ದಾರೆ. 20ಕ್ಕಿಂತ ಹೆಚ್ಚು ಅರವಣಪಾಯಸ ಖರೀದಿಸಿದಲ್ಲಿ ಇವುಗಳನ್ನು ಬಾಕ್ಸ್‍ಗಳಲ್ಲಿ ತುಂಬಬೇಕಾಗುತ್ತದೆ. ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಅರವಣಪಾಯಸ ಮಾರಾಟವಾಗುತ್ತಿದ್ದು, ಈ ಹಿಂದಿನ ದಾಸ್ತಾನಿನಿಂದ ಪ್ರತಿದಿನ ಒಂದು ಲಕ್ಷ ಅರವಣಪಾಯಸ ಟಿನ್‍ಗಳನ್ನು ತೆಗೆಯಲಾಗುತ್ತಿದೆ. ಈ ರೀತಿ ಹಳೇ ದಾಸ್ತಾನಿನಿಂದ ಅರವಣಪಾಯಸ ತೆಗೆದಲ್ಲಿ ಮುಂದಿನ ದಿನಗಳಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಾಗುವ ಸಾಧ್ಯತೆಯಿರುವುದಾಗಿಯೂ ದೇವಸ್ವಂ ಮಂಡಳಿ ತಿಳಿಸಿದೆ. ಪ್ರತಿದಿನ ಎರಡುವರೆಯಿಂದ ಮೂರು ಲಕ್ಷ ಟಿನ್ ಅರವಣಪಾಯಸ ಉತ್ಪಾದಿಸಲಾಗುತ್ತಿದ್ದರೆ, ಮೂರೂವರೆಯಿಂದ ನಾಲ್ಕು ಲಕ್ಷ ಟಿನ್ ಮಾರಾಟವಾಗುತ್ತಿರುವುದಾಗಿ ದೇವಸ್ವಂ ಬೋರ್ಡ್ ಅಧಿಕಾರಿಗಳು ತಿಳಿಸಿದ್ದಾರೆ.

