HEALTH TIPS

ಭಾರತೀಯ ಸೇನೆಗೆ ಮತ್ತಷ್ಟು ಬಲ; 2,500 ಕೋಟಿ ರೂ. ಮೌಲ್ಯದ ಪಿನಾಕಾ ರಾಕೆಟ್‌ ಖರೀದಿಗೆ ಪ್ರಸ್ತಾವನೆ: ಪಾಕಿಸ್ತಾನಕ್ಕೆ ನಡುಕು ಶುರು

ನವದೆಹಲಿ: ಭಾರತೀಯ ಸೇನೆಗೆ (Indian Army) ಮತ್ತಷ್ಟು ಬಲ ತರುವ ನಿಟ್ಟಿನಲ್ಲಿ, 2,500 ಕೋಟಿ ರೂ. ಮೌಲ್ಯದ 120 ಕಿ.ಮೀ. ವ್ಯಾಪ್ತಿಯ ಪಿನಾಕಾ ರಾಕೆಟ್‌ಗಳ (Pinaka rockets) ಖರೀದಿಯ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಭಾರತದ ದೀರ್ಘ ವ್ಯಾಪ್ತಿ ದಾಳಿ ಸಾಮರ್ಥ್ಯವನ್ನು ಬಲಪಡಿಸುವ ಮತ್ತು ಶಸ್ತ್ರಾಸ್ತ್ರ ಸಂಗ್ರಹವನ್ನು ವಿಸ್ತರಿಸುವ ಮಹತ್ವದ ಕ್ರಮವಾಗಿ ಈ ಪ್ರಸ್ತಾಪವನ್ನು ಮುಂದಿಡಲಾಗಿದೆ.

ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ ವ್ಯವಸ್ಥೆಯ ವ್ಯಾಪ್ತಿ ಮತ್ತು ಮಾರಕ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುವುದೇ ಈ ಯೋಜನೆಯ ಉದ್ದೇಶ. ಹಿರಿಯ ರಕ್ಷಣಾ ಅಧಿಕಾರಿಗಳ ಪ್ರಕಾರ, ಈ ಪ್ರಸ್ತಾವನೆಯನ್ನು ಶೀಘ್ರದಲ್ಲೇ ರಕ್ಷಣಾ ಖರೀದಿ ಮಂಡಳಿ (DAC) ಅನುಮೋದನೆಗಾಗಿ ಮುಂದಿಡಲಾಗುವ ಸಾಧ್ಯತೆ ಇದೆ.

ಈ ಹೊಸ ರಾಕೆಟ್‌ಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಅಭಿವೃದ್ಧಿಪಡಿಸಲಿದೆ. ಈಗಾಗಲೇ ವಿಸ್ತೃತ ವ್ಯಾಪ್ತಿಯ ಈ ರೂಪಾಂತರವನ್ನು ಅಭಿವೃದ್ಧಿಪಡಿಸುವಲ್ಲಿ DRDO ಮುಂದುವರಿದ ಹಂತದಲ್ಲಿದೆ ಎಂದು ತಿಳಿದುಬಂದಿದೆ.

120 ಕಿ.ಮೀ. ವ್ಯಾಪ್ತಿಯ ರಾಕೆಟ್‌ಗಳು ಈಗಾಗಲೇ ಬಳಕೆಯಲ್ಲಿರುವ ಪಿನಾಕಾ ಲಾಂಚರ್‌ಗಳೊಂದಿಗೆ ಹೊಂದಾಣಿಕೆಯಾಗುತ್ತವೆ. ಪ್ರಸ್ತುತ, 40 ಕಿ.ಮೀ. ಮತ್ತು 75 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯ ರಾಕೆಟ್‌ಗಳನ್ನು ಹಾರಿಸುತ್ತವೆ. ಇದು ಯುದ್ಧದ ಸಂದರ್ಭದಲ್ಲಿ ಭಾರತೀಯ ಸೇನೆಗೆ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಆಪರೇಷನ್ ಸಿಂದೂರ್‌ ಕಾರ್ಯಾಚರಣೆಯ ನಂತರ ಸೇನೆ ತನ್ನ ಸಾಮರ್ಥ್ಯವನ್ನು ವಿಸ್ತರಿಸುವ ದೊಡ್ಡ ಪ್ರಯತ್ನದ ನಡುವೆಯೇ ದೀರ್ಘವ್ಯಾಪ್ತಿ ಪಿನಾಕಾ ಅಭಿವೃದ್ಧಿಗೆ ಮುಂದಾಗಿದೆ.

ಆಪರೇಷನ್ ಸಿಂದೂರ್ ನಂತರ ಸೇನೆಯು ತನ್ನ ಫಿರಂಗಿ ಬಲವನ್ನು ಹೆಚ್ಚಿಸಿಕೊಳ್ಳುವ ವ್ಯಾಪಕ ಪ್ರಯತ್ನದ ಮಧ್ಯೆ, ದೀರ್ಘ-ಶ್ರೇಣಿಯ ಪಿನಾಕಾಗೆ ಒತ್ತು ನೀಡಲಾಗಿದೆ. ಸೇನೆ ಈಗಾಗಲೇ ತನ್ನ ಪಿನಾಕಾ ರೆಜಿಮೆಂಟ್‌ಗಳನ್ನು ಬಲಪಡಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ. ಇತ್ತೀಚೆಗೆ ಏರಿಯಾ ಡಿನೈಯಲ್ ಶಸ್ತ್ರಾಸ್ತ್ರಗಳು ಹಾಗೂ ಹೆಚ್ಚುವರಿ ಸಾಮರ್ಥ್ಯದ ಹೈ-ಎಕ್ಸ್‌ಪ್ಲೋಸಿವ್ ರಾಕೆಟ್‌ಗಳಿಗಾಗಿ ಆದೇಶಗಳನ್ನು ನೀಡಿರುವುದಾಗಿ ತಿಳಿದುಬಂದಿದೆ.

ಈ ವರ್ಷದ ಆರಂಭದಲ್ಲಿ, ರಕ್ಷಣಾ ಸಚಿವಾಲಯವು ಡಿಪಿಐಸಿಎಂ ಏರಿಯಾ ಡಿನೈಯಲ್ ಮ್ಯುನಿಷನ್ ಟೈಪ್-1 ಹಾಗೂ ಹೈ ಎಕ್ಸ್‌ಪ್ಲೋಸಿವ್ ಪ್ರೀ-ಫ್ರಾಗ್ಮೆಂಟೆಡ್ Mk-1 (ಎನ್‌ಹಾನ್ಸ್ಡ್) ರಾಕೆಟ್‌ಗಳ ಖರೀದಿಗಾಗಿ ಇಕನಾಮಿಕ್ ಎಕ್ಸ್‌ಪ್ಲೋಸಿವ್ಸ್ ಲಿಮಿಟೆಡ್ (EEL) ಮತ್ತು ಮ್ಯುನಿಷನ್ಸ್ ಇಂಡಿಯಾ ಲಿಮಿಟೆಡ್ (MIL) ಸಂಸ್ಥೆಗಳೊಂದಿಗೆ ಒಟ್ಟು 10,147 ಕೋಟಿ ರೂ. ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಿತ್ತು.

ರಕ್ಷಣಾ ಸಚಿವಾಲಯವು ಶಕ್ತಿ (SHAKTI) ಫೈರ್-ಕಂಟ್ರೋಲ್ ಸಾಫ್ಟ್‌ವೇರ್‌ ನವೀಕರಣಕ್ಕಾಗಿ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಜತೆಗೆ ಒಪ್ಪಂದವನ್ನು ಮುಕ್ತಾಯಗೊಳಿಸಿದೆ. ಇದರಿಂದ ಈ ವ್ಯವಸ್ಥೆಯ ಕಾರ್ಯಾತ್ಮಕ ಪರಿಣಾಮಕಾರಿತ್ವ ಮತ್ತಷ್ಟು ಹೆಚ್ಚಾಗಲಿದೆ. ಒಪ್ಪಂದಗಳ ಸಹಿಯ ಸಂದರ್ಭದಲ್ಲಿ ರಕ್ಷಣಾ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಉಪಸ್ಥಿತರಿದ್ದರು.

120 ಕಿ.ಮೀ. ವ್ಯಾಪ್ತಿಯ ಪಿನಾಕಾ ರೂಪಾಂತರವನ್ನು ಮುಂದಿನ ಹಣಕಾಸು ವರ್ಷದಲ್ಲಿ ಮೊದಲ ಬಾರಿ ಪರೀಕ್ಷೆ ನಡೆಸಲು ಯೋಜಿಸಲಾಗಿದೆ ಎಂದು DRDO ಅಧಿಕಾರಿ ದೃಢಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries