ಕಾಸರಗೋಡು: ತ್ರಿಸ್ತರ ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರು ಪ್ರತಿಜ್ಞಾವಿಧಿ ಸ್ವೀಕರಿಸುತ್ತಿದ್ದಂತೆ ಸ್ಥಳೀಯಾಡಳಿತ ಸಂಸ್ಥೆಗಳ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗಳಿಗೆ ರಾಜಕೀಯ ಪಕ್ಷಗಳಲ್ಲಿ ಲೆಕ್ಕಾಚಾರ ಆರಂಭಗೊಂಡಿದೆ.
ಜಿಲ್ಲೆಯ ಮಂಜೇಶ್ವರ, ವರ್ಕಾಡಿ, ಮಂಗಲ್ಪಾಡಿ, ಕುಂಬಳೆ ಮೊದಲಾದ ಪಂಚಯಿತಿಗಳಲ್ಲಿ ಅಧ್ಯಕ್ಷ ಹುದ್ದೆಗೆ ಪೈಪೋಟಿ ನಡೆದುಬರುತ್ತಿದೆ. ತ್ರಿಸ್ತರ ಪಂಚಾಯತ್ ಪ್ರತಿನಿಧಿಗಳಾಗಿ ಆಯ್ಕೆಗೊಂಡ ನೂತನ ಸದಸ್ಯರ ಪ್ರಮಾಣವಚನ ಭಾನುವರ ನಡೆದಿದ್ದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ 26 ಮತ್ತು 27ರಂದು ನಡೆಯಲಿದೆ.
ನಗರಸಭಾ ಅಧ್ಯಕ್ಷರ ಚುನಾವಣೆ ಡಿ. 26ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಉಪಾಧ್ಯಕ್ಷರ ಆಯ್ಕೆ ಅಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ. ಉಳಿದಂತೆ ಗ್ರಾಮ ಪಂಚಾಯಿತಿ, ಬ್ಲಾಕ್ ಪಂಚಾಯಿತಿ, ಜಿಲ್ಲಾಪಂಚಾಯಿತಿ ಅಧ್ಯಕ್ಷರ ಚುನಾವಣೆ 27ರಂದು ಬೆಳಿಗ್ಗೆ 10.30ಕ್ಕೆ ಹಾಗೂ ಉಪಾಧ್ಯಕ್ಷರ ಆಯ್ಕೆ ಅಂದು ಮಧ್ಯಾಹ್ನ 2.30ಕ್ಕೂ. ನಡೆಯಲಿದೆ. ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆಯಾ ಚುನಾವಣಾಧಿಕಾರಿಗಳ ಉಪಸ್ಥಿತಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ನಡೆಯಲಿದೆ. ಅಧ್ಯಕ್ಷರ ಅಥವಾ ಉಪಾಧ್ಯಕ್ಷ ಹುದ್ದೆಗೆ ಒಂದಕ್ಕಿಂತ ಅಧಿಕ ಅಭ್ಯರ್ಥಿಗಳು ಹಕ್ಕು ಮಂಡಿಸಿದಲ್ಲಿ, ಸದಸ್ಯರ ಮುಕ್ತ ಮತದಾನದ ಮೂಲಕ ಆಯ್ಕೆ ನಡೆಯಲಿದೆ.


