ಕಾಸರಗೋಡು: ಇಂಡಿಯನ್ ಕಾಮರ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಲಾದ 76ನೇ ಅಖಿಲ ಭಾರತ ವಾಣಿಜ್ಯ ಸಮ್ಮೇಳನದಲ್ಲಿ ಕೇರಳ ಕೇಂದ್ರ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಅಂತಾರಾಷ್ಟ್ರೀಯ ವ್ಯವಹಾರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಮಕೃಷ್ಣ ಬಂಡಾರು ಅವರು ಪ್ರಸ್ತುತಪಡಿಸಿದ ಅತ್ಯುತ್ತಮ ಪ್ರಬಂಧಕ್ಕೆ ಚಿನ್ನದ ಪದಕ ನೀಡಿ ಗೌರವಿಸಲಾಗಿದೆ.
"ಡಿಜಿಟಲ್ ಆರ್ಥಿಕತೆಯಲ್ಲಿ ಸ್ಥಳೀಯ ಬುಡಕಟ್ಟುಗಳ ಪಾತ್ರ-ಮಲಬಾರ್ ಪ್ರದೇಶಕ್ಕೆ ಒಂದು ಮಾದರಿ" ಎಂಬ ಸಂಶೋಧನಾ ಪ್ರಬಂಧ ಪ್ರಸ್ತುತಪಡಿಸಿದ್ದರು. ಬೆಂಗಳೂರಿನಲ್ಲಿ ನಡೆದ ಮೂರು ದಿನಗಳ ಸಮ್ಮೇಳನದಲ್ಲಿ ಅವರಿಗೆ 2025 ರ ಅತ್ಯುತ್ತಮ ವ್ಯವಹಾರ ಅಕಾಡೆಮಿಕ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2019 ಮತ್ತು 2022ರಲ್ಲಿ ಡಾ. ರಾಮಕೃಷ್ಣ ಬಂಡಾರು ಬೆಳ್ಳಿ ಪದಕವನ್ನು ಪಡೆದಿದ್ದರು. ತೆಲಂಗಾಣ ಮೂಲದ ಡಾ. ರಾಮಕೃಷ್ಣ ಬಂಡಾರು 2022 ರಿಂದ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದಾರೆ.


