ನವದೆಹಲಿ: ಜನಗಣತಿ ಸಂದರ್ಭದಲ್ಲಿ ಅಂತರ್‌ಲಿಂಗಿ (ಇಂಟರ್‌ಸೆಕ್ಸ್) ವ್ಯಕ್ತಿಗಳ ಜನನ ಮತ್ತು ಮರಣ ಕುರಿತು ಮಾಹಿತಿ ದಾಖಲಿಸುವುದಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಮೂವರು ಸದಸ್ಯರು ಇರುವ ಪೀಠಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ.
ಈ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು, 'ಇದು ಅತ್ಯುತ್ತಮ ಮೇಲ್ಮನವಿ' ಎಂದರು.
ಇಂತಹ ಅವಕಾಶ ಕಲ್ಪಿಸುವಂತೆ ಕೋರಿ 34 ವರ್ಷದ ಅಂತರ್ ಲಿಂಗಿ ವ್ಯಕ್ತಿ ಶಂಕರ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.
ವಿಚಾರಣೆ ವೇಳೆ, ಕೇಂದ್ರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈ ಅರ್ಜಿಗೆ ವಿರೋಧ ವ್ಯಕ್ತಪಡಿಸಲಿಲ್ಲ.
ಅಂತರ್‌ಲಿಂಗಿಗಳ ಲಿಂಗತ್ವ ಕುರಿತ ವಿವರಗಳನ್ನು ಒಳಗೊಂಡ ಗುರುತಿನ ಚೀಟಿಗಳನ್ನು ನೀಡಬೇಕು, ಅಂತರ್‌ಲಿಂಗಿ ಶಿಶುಗಳು ಹಾಗೂ ಮಕ್ಕಳಿಗೆ ವೈದ್ಯಕೀಯ ನೆರವು ನೀಡುವ ಸಂಬಂಧ ಕಾನೂನು ರೂಪಿಸಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರ ಕೋರಿದ್ದಾರೆ.

