ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯ ಮತದಾನ ಮುಗಿದಿರುವುದರಿಂದ, ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಬಳಸಿರುವ ಪ್ರಚಾರ ಸಾಮಗ್ರಿಗಳನ್ನು ತೆಗೆದುಹಾಕಬೇಕು ಎಂದು ರಾಜ್ಯ ಚುನಾವಣಾ ಆಯುಕ್ತ ಎ. ಶಹಜಹಾನ್ ಹೇಳಿದ್ದಾರೆ.
ಎಣಿಕೆ ಕೇಂದ್ರಗಳಲ್ಲಿ, ಅಧಿಕಾರಿಗಳು ಮತ್ತು ಇತರರು ಹಸಿರು ಸಂಹಿತೆಯನ್ನು ಅನುಸರಿಸಲು ಜಾಗರೂಕರಾಗಿರಬೇಕು. ರಸ್ತೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿರುವ ಪ್ರಚಾರ ಫಲಕಗಳು ಮತ್ತು ಬ್ಯಾನರ್‍ಗಳನ್ನು ತಕ್ಷಣ ತೆಗೆದುಹಾಕಲು ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಮುಂದಾಗಬೇಕು.
ಅವುಗಳನ್ನು ತೆಗೆದುಹಾಕದಿದ್ದರೆ, ಸಂಬಂಧಪಟ್ಟ ಸ್ಥಳೀಯಾಡಳಿತ ಸಂಸ್ಥೆಗಳು ಅವುಗಳನ್ನು ತೆಗೆದುಹಾಕುತ್ತವೆ ಮತ್ತು ಹಾಗೆ ಮಾಡುವ ವೆಚ್ಚವನ್ನು ಆಯಾ ಅಭ್ಯರ್ಥಿಗಳಿಂದ ವಿಧಿಸಲಾಗುತ್ತದೆ ಮತ್ತು ಅವರ ಚುನಾವಣಾ ವೆಚ್ಚದಲ್ಲಿ ಸೇರಿಸಲಾಗುತ್ತದೆ.
ವಿಜಯೋತ್ಸವಕ್ಕೆ ಕಟ್ಟುನಿಟ್ಟಿನ ನಿಯಂತ್ರಣ
ಸ್ಥಳೀಯಾಡಳಿತ ಸಂಸ್ಥೆ ಚುನಾವಣೆ ಮತ ಎಣಿಕೆ ಡಿ. 13ರಂದು ನಡೆಲಿದ್ದು, ವಿಜೇತ ಅಭ್ಯರ್ಥಿಗಳ ಪರ ವಿಜಯೋತ್ಸವಕ್ಕೆ ಸಂಜೆ 6ರ ವರೆಗೆ ಮಾತ್ರ ಪೊಲೀಸರು ಅನುಮತಿ ನಿಡಿದ್ದು, ಸಂಜೆ 6ರ ನಂತರ ನಡೆಯುವ ಮೆರವಣಿಗೆ, ಜಾಥಾ, ವಾಹನ ಮೆರವಣಿಗೆ ಸೇರಿದಂತೆ ವಿಜಯೋತ್ಸವ ಕಾರ್ಯಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ವಿಜೇತ ಅಭ್ಯರ್ಥಿಗಳು ತಮ್ಮ ಇದಿರಾಳಿ ಅಭ್ಯರ್ಥಿ ಮನೆ ಎದುರು ಪಟಾಕಿ ಸಿಡಿಸುವುದು, ಅವರ ವಿರುದ್ಧ ಮಾನಹಾನಿಕರ ಘೋಷಣೆ ಕೂಗದಿರುವಂತೆಯೂ ಸೂಚಿಸಲಾಗಿದೆ. , ಸಾರ್ವಜನಿಕ ರಸ್ತೆಗಳು ಮತ್ತು ಜಂಕ್ಷನ್‍ಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ಧ್ವನಿವರ್ಧಕಗಳನ್ನು ಬಳಸದಂತೆ ನಿಗಾ ವಹಿಸಬೇಕು, ಕಾನೂನುಬದ್ಧವಾಗಿ ಮಾತ್ರ ಪಟಾಕಿ ಬಳಸಬೇಕು. ವಿಜಯೋತ್ಸವ ಸಂದರ್ಭ ಹಸಿರು ಸಂಹಿತೆ, ಶಬ್ದ ನಿಯಂತ್ರಣ ಮತ್ತು ಪರಿಸರ ಕಾನೂನುಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಚುನಾವಣಾ ಆಯೋಗ ನಿರ್ದೇಶಿಸಿದೆ. ಮತ ಎಣಿಕೆ ಕಾರ್ಯದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಬಿ ವಿಜಯಭರತ್ ರೆಡ್ಡಿ ತಿಳಿಸಿದ್ದಾರೆ.

