ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಮುಖ್ಯಸ್ಥ ಟಿಟಿವಿ ದಿನಕರನ್ ಬುಧವಾರ (ಜನವರಿ 21) ಎನ್‌ಡಿಎ ಮೈತ್ರಿಕೂಟಕ್ಕೆ ಮರಳಿದ್ದಾರೆ.
ಈ ಘೋಷಣೆಯ ಬಳಿಕ ದಿನಕರನ್ ಚೆನ್ನೈನಲ್ಲಿ ಬಿಜೆಪಿ ತಮಿಳುನಾಡು ಚುನಾವಣಾ ಉಸ್ತುವಾರಿ ಪಿಯೂಷ್ ಗೋಯಲ್ರನ್ನು ಭೇಟಿಯಾದರು.
2026 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮುಕ್ಕುಲಥೋರ್ ಮತಗಳನ್ನು ಕ್ರೋಢೀಕರಿಸಲು ಮತ್ತು ಡಿಎಂಕೆ ಪ್ರಾಬಲ್ಯಕ್ಕೆ ತಿರುಗೇಟು ನೀಡಲು ದಿನಕರನ್ ಉಪಸ್ಥಿತಿ ನಿರ್ಣಾಯಕವಾಗಿತ್ತು.
ಎನ್‌ಡಿಎಗೆ ಕಮ್ಬ್ಯಾಕ್..
ಕೇಂದ್ರ ಗೃಹ ಸಚಿವ ಅಮಿತ್ ಷಾ ಸಲಹೆಯ ಮೇರೆಗೆ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದ್ದು, ಉಸ್ತುವಾರಿ ಪಿಯೂಷ್ ಗೋಯಲ್ರೊಂದಿಗೆ ದಿನಕರನ್ ಪ್ರಚಾರ ತಂತ್ರಗಳನ್ನು ರೂಪಿಸಲು ಸಭೆ ಸೇರಿದ್ದು, ಚೆನ್ನೈನಲ್ಲಿ ನಡೆದ ಈ ಚರ್ಚೆಯಲ್ಲಿ ಎಐಎಡಿಎಂಕೆಯ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಜೊತೆಗಿನ ಹಿಂದಿನ ಬಿರುಕುಗಳ ಹೊರತಾಗಿಯೂ, ಎಎಂಎಂಕೆಯನ್ನು ಒಟ್ಟುಗೂಡಿಸುವ ಮೂಲಕ ತನ್ನ ದಕ್ಷಿಣದ ಹೆಜ್ಜೆಗುರುತನ್ನು ವಿಸ್ತರಿಸುವ ಆಲೋಚನೆಯಲ್ಲಿ ಬಿಜೆಪಿ ನಾಯಕರಿದ್ದಾರೆ.
ಹೊಸ ಆರಂಭ ಎಂದ ದಿನಕರನ್
ರಾಜಿ ಮಾಡಿಕೊಳ್ಳುವುದರಲ್ಲಿ ಏನೂ ವಿಶೇಷತೆ ಇಲ್ಲ, ಇದು ಹೊಸ ಆರಂಭ, ಮತ್ತು ನಾವು ತಮಿಳುನಾಡಿನಲ್ಲಿ ಹೊಸ ಆಡಳಿತವನ್ನು ರಚಿಸಲು ಶಕ್ತಿ ಮೀರಿ ಶ್ರಮಿಸುತ್ತೇವೆ. ತ್ಯಾಗ ಮಾಡುವವರು ಎಂದಿಗೂ ಕೆಳಗಿಳಿದಿಲ್ಲ. ಅಮ್ಮ (ಜಯಲಲಿತಾ) ಅವರ ನಿಜವಾದ ಅನುಯಾಯಿಗಳಾಗಿ, ನಾವೆಲ್ಲರೂ ಒಟ್ಟಾಗಿ ಸೇರಿ ಆಡಳಿತವನ್ನು ರೂಪಿಸುತ್ತೇವೆ ಎಂದು ಟಿಟಿವಿ ದಿನಕರನ್ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ದಿನಕರನ್ ಕಮಾಲ್
2024 ರ ಲೋಕಸಭಾ ಚುನಾವಣೆಯಲ್ಲಿ ಟಿಟಿವಿ ದಿನಕರನ್ರ ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ), ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದು, ತೇಣಿ ಮತ್ತು ತಿರುಚಿರಾಪಳ್ಳಿ ಸ್ಥಾನಗಳಲ್ಲಿ ಸ್ಪರ್ಧಿಸಿ ಒಟ್ಟಾರೆ 3,93,415 ಮತಗಳನ್ನು ಗಳಿಸಿತು. ದಿನಕರನ್ ಸ್ವತಃ ತೇಣಿಯಿಂದ ಸ್ಪರ್ಧಿಸಿ, 2,92,668 ಮತಗಳನ್ನು ಪಡೆದರು ಕೂಡ ಡಿಎಂಕೆಯ ತಂಗಾ ತಮಿಳು ಸೆಲ್ವನ್ ವಿರುದ್ಧ ಸೋಲನುಭವಿಸಿದ್ದರು. ಈ ಮತಪ್ರಮಾಣ ಆ ಭಾಗದ ಮತದಾರರಲ್ಲಿ ಎಎಂಎಂಕೆಯ ಬಗೆಗಿನ ಒಲವನ್ನು ಎತ್ತಿ ತೋರಿಸಿತ್ತು.
ದಕ್ಷಿಣ ಜಿಲ್ಲೆಗಳಾದ ತೇಣಿ, ಶಿವಗಂಗಾ, ರಾಮನಾಥಪುರಂ ಮತ್ತು ಮಧುರೈಗಳಲ್ಲಿನ ಮುಕ್ಕುಳಥೋರ್ ಸಮುದಾಯಗಳಲ್ಲಿ (ತೇವರ್‌ಗಳು, ಮರವರ್‌ಗಳು, ಅಗಮುದಾಯರ್‌ಗಳು) ದಿನಕರನ್ ಪ್ರಭಾವವಿದ್ದು, ಎಎಂಎಂಕೆಗೆ ಮತಬುಟ್ಟಿಗೆ ಅನಾಯಾಸವಾಗಿ ಶೇ 10-15 ರಷ್ಟು ಮತ ಬೀಳುತ್ತವೆ. ಈಗ ಅವರು ಎನ್‌ಡಿಎ ತೆಕ್ಕೆಗೆ ಬೀಳುವುದರಿಂದ ಈ ಪುನರ್ಮಿಲನ ಬಿಜೆಪಿಗೆ ಅನಿವಾರ್ಯವಾಗಿತ್ತು.

