ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 18, 2017
ನನ್ನ ಒಂದು ಭಿಕ್ಷೆಯ ಕಥೆ-ಕಲಾವಿದರೊಬ್ಬರ ಅಂತರಂಗದ ಭಾವ ಧಿಗಿಣ
ಸಂಪಾದಕ: ಜಗತ್ತಿನ ಅತ್ಯಪೂರ್ವವಾದ ಕರಾವಳಿ ಕನರ್ಾಟಕದ ಹೆಮ್ಮೆಯ ಯಕ್ಷಗಾನ ಕಲೆ ಬೆಳೆದು ಬಂದಿರುವುದು, ಪಡೆದಿರುವ ಸ್ವರೂಪ ಮತ್ತು ಅದರ ಜನಾಕರ್ಷಣೆ ವಿಶಿಷ್ಟವಾದುದು. ಪುರಾಣಗಳಿಗೆ ಧ್ವನಿಯಾಗಲು ರಾತ್ರಿಯಿಂದ ಮುಂಜಾನೆಯ ವರೆಗೆ ಕಲಾವಿದನೋರ್ವ ಮಾಡುವ ಪರಕಾಯ ಪ್ರವೇಶ ಭಗವಂತನ ವರಪ್ರಸಾದದ ಮಹತ್ತರತೆಯ ಸಂಕೇತವೆಂದರೆ ಅತಿಶಯೋಕ್ತಿಯೆನಿಸದರು.
ಪ್ರತಿಯೊಬ್ಬ ಕಲಾವಿದ ಬದುಕು-ಅನುಭವ ಮುಂದಿನ ತಲೆಮಾರಿಗೆ ನಾವೊದಗಿಸುವ ದಾಖಲೀಕರಣವಾಗಬೇಕಿದ್ದು, ಅದು ನಿತ್ಯ ನಿರಂತರತೆಯಿಂದ ಬೆಳೆದುಬರಬೇಕು. ಇದು ವರ್ತಮಾನದೊಂದಿಗೆ ಭವಿಷ್ಯವನ್ನು ಭೂತದ ನೆನಪುಗಳೊಂದಿಗೆ ಬೆಸೆದು ಬೆಳೆಸುತ್ತದೆ. ಇಲ್ಲೊಬ್ಬರು ಕಲಾವಿದರ ಸ್ವಾನುಭವದ ಸ್ವಗತ ಸಮರಸದ ಓದುಗರಿಗೆ ನಲ್ಮೆಯಿಂದ ಹಂಚಬೇಕೆನಿಸಿತು.ನೀವೂ ಅದರೊಂದಿಗೆ ಅನುಸಂಧಾನಗೊಂಡಾಗ ಅರ್ಥವಾಗುತ್ತದೆ...ಏನು..ಅಬ್ಬಾ ಕಲೆಯ, ಕಲಾವಿದನ ಅನುಪಮ ಸಾಧನೆಗಳು.....
ಈಗ ಓದಿ....
ಪ್ರತಿಯೊಬ್ಬ ಮನುಜನಿಗೂ ಒಂದು ಆಸೆ ಇರುತ್ತದೆ .
ನಾನು ಎಂದಿಗೂ ಭಿಕ್ಷೆ ಬೇಡುವ ಸ್ಥಿತಿಗೆ ಬರಬಾರದು ಎಂದು..
ಎಲ್ಲರಂತೆಯೇ ನನಗೂ ಅದೇ ಆಸೆ.
ನಾನು ಚಿಕ್ಕವನಿದ್ದಾಗ ಪುತ್ತೂರು ಜಾತ್ರೆಯಲ್ಲಿ ಹೋದ ತಕ್ಷಣ ಅಲ್ಲಿರುವ ಭಿಕ್ಷುಕರಿಗೆ ನನ್ನ ಕೈಯಲ್ಲಿ ಬಿಕ್ಷೆ ಹಾಕಿಸುತ್ತಿದ್ದರು ನನ್ನಪ್ಪ.
ದೇವರ ಹುಂಡಿಗೆ ಕಾಣಿಕೆ ಹಾಕುವುದಾದರೂ ನನ್ನ ಅಪ್ಪನಿಗೆ ಮರೆತೀತೋ ಏನೋ,
ಆದರೆ ಭಿಕ್ಷುಕರಿಗೆ ಹಣ ಹಾಕದೆ ಮುಂದೆ ಹೋಗುವವರಲ್ಲ.
ಇದೇ ಕ್ರಮ ಇಂದಿಗೊರೆಗೂ ಮುಂದುವರೆದಿದೆ.
ಆಗ ಆ ಭಿಕ್ಷುಕರು ನಾವು ಕೊಟ್ಟ ಚಿಲ್ಲರೆಯನ್ನು ಸ್ವೀಕರಿಸಿ ಕೃತಜ್ಞತಾ ಪೂರ್ವಕವಾದ ನಗು ಬೀರಿದಾಗ ಆ ನಗು ಮನಸ್ಸಿಗೆ ಹಿತ ತರುತ್ತಿತ್ತು.
ಹೀಗೆ ಎಳವೆಯಲ್ಲಿಯೇ ಭಿಕ್ಷೆ ಹಾಕುವಾಗ ಆ ಭಿಕ್ಷುಕರ ನಗುವನ್ನೇ ನೋಡಿದ್ದೆ ಹೊರತು,
ಭಿಕ್ಷೆ ಬೇಡುವಲ್ಲಿ ಅವರಿಗಿರುವ ಮುಜುಗರ,ಅವರಿಗಾಗುವ ಅಂಜಿಕೆ ,ಹಾಗು ಅವರಿಗಿರುವ ಅನಿವಾರ್ಯತೆಗಳ ಅರಿವಾಗಿರಲಿಲ್ಲ..
ಆದರೆ ನನ್ನ ಹಣೆಯಲ್ಲೂ ಭಿಕ್ಷೆ ಬೇಡುವಂತೆ ಬ್ರಹ್ಮ ಬರೆದಿದ್ದಾನೆಂದು ತಿಳಿದದ್ದು ಈಗ.
ಹೌದು...
ಪ್ರತಿಯೊಬ್ಬನಿಗೂ ಎಲ್ಲಾ ಕಷ್ಟಗಳ ಅರಿವಾದಾಗಲೇ ಮನುಷ್ಯನ ಸೊಕ್ಕಿಗೆ ಕಡಿವಾಣ ಬೇಳುವುದಂತೆ .
ನನಗೂ ಭಿಕ್ಷೆ ನೀಡಿ ತಿಳಿದಿತ್ತೇ ಹೊರತು ಬೇಡಿ ಗೊತ್ತಿರಲಿಲ್ಲ.
ಭಿಕ್ಷೆ ಹಾಕಿದ ಹಣವನ್ನು ಸಂಪಾದಿಸಿಯೂ ಆಗ ತಿಳಿದಿರಲಿಲ್ಲ.
ಆದರೆ ಈಗ ನಾನೇ ಭಿಕ್ಷುನಾದೆ...ಅದರ ಬೆಲೆ ತಿಳಿದೆ.
ಹೌದು..ನಾನು ಭಿಕ್ಷೆ ಬೇಡಿದೆ.
ಆದರೆ ಗಣರಾಜ ಭಟ್ಟನಾಗಿ ಅಲ್ಲ .ಚಂದ್ರವರ್ಮನಾಗಿ...
ನಮ್ಮ ದೇಂತಡ್ಕ ಮೇಳದ ಈ ವರುಷದ ನೂತನ ಕಥಾನಖ *ನಾಗ ನಾಗಿಣಿ* ಪ್ರಸಂಗದಲ್ಲಿ ನನ್ನದು ಕಾಕರ್ೋಟಕ ಕಚ್ಚಿದ ಚಂದ್ರವರ್ಮನ ಪಾತ್ರ.
ಈ ಪಾತ್ರಕ್ಕು ನನ್ನ ಅನುಭವಕ್ಕೂ ಸಾಮ್ಯತೆ ಇದೆ.
ಅದುವರೆಗೂ ಅನೇಕರಿಗೆ ಬಿಕ್ಷೆ ನೀಡಿ ಬಡವರ ಬಂದುವಾಗಿದ್ದ ಚಂದ್ರವರ್ಮ. ಕಾಲನ ಆಟಕ್ಕೆ ಸಿಲುಕಿ ಮಡದಿಯೊಡನೆ ವನವಾಸಿಯಾಗಿ, ಅಲ್ಲಿ ಕಾಕರ್ೋಟಕ ಕಚ್ಚಿದ ಕಾರಣ ಕುಷ್ಟರೋಗ ಪೀಡಿತನಾಗಿ ಬಿಕ್ಷೆ ಬೇಡುವ ಹಂತಕ್ಕೆ ತಲುಪುತ್ತಾನೆ.
ಈ ಪಾತ್ರ ನನ್ನದ್ದು.
ಈ ಪ್ರಸಂಗ ಮೊದಲ ಪ್ರದರ್ಶನಕ್ಕೆ ಅಣಿಯಾಗುತ್ತಿತ್ತು.
ಮೊದಲ ಸೀನ್ ಲೀಸ್ಟ್ ಆದಾಗಲೇ ಭಾಗವತರು ನನ್ನನ್ನು ಕರೆದು, ಈ ಪಾತ್ರದಲ್ಲಿ ಭಿಕ್ಷೆ ಬೇಡಲು ಇದೆ ಸಭೆಯಲ್ಲಿ ಭಿಕ್ಷೆ ಬೇಡು ಎಂದರು.ನಾನು ನಿರಾಕಾರದ ನಗು ಬೀರಿದಾಗ
ನಿನ್ನ ಹಣೆ ಬರಹದಲ್ಲಿ ಭಿಕ್ಷೆ ಬೇಡುವ ಯೋಗ ಇದ್ದರೆ ಅದು ಈ ಮೂಲಕ ನಡೆಯಲಿ, ನಿಜ ಜೀವನದಲ್ಲಿ ಆ ಗಳಿಗೆ ಬಾರದೆ ಆಗಲಿ.ಅದೆಲ್ಲ ಇದರಲ್ಲೇ ಕಳೆದು ಹೋಗುತ್ತದೆ. ಎಂದು ಹೇಳಿದಾಗ ಒಮ್ಮೆಗೆ ಕಣ್ಣುಗಳು ತುಂಬಿ ಬಂತು.ಆಗ ಮತ್ತೆ ಅವರು ನೆನಪಿಸಿದರು *ಅದು ಬೇಡುವುದು ನೀನಲ್ಲ ಮಹರಾಯ ,ಚಂದ್ರವರ್ಮ ಅಲ್ವಾ...ಹಣ ಮಾತ್ರ ನಿನಗೆ*ಎಂದು ನಕ್ಕು ತೆರಳಿದರು.
ಪ್ರಸಂಗ ಪ್ರಾರಂಭವಾಯ್ತು.
ಅಳುತ್ತಲೇ ನನ್ನ ಪ್ರವೇಶವೂ ಆಯ್ತು.
ಭಿಕ್ಷೆ ಬೇಡೂದಕ್ಕೂ ಸಿದ್ದನಾದೆ.
ನನಗೆ ಮಾರ್ಗದರ್ಶಕರಾದ ಶ್ರೀ ರಮೇಶ ಕುಲಶೇಖರರೂ ಮಡದಿಯ ಪಾತ್ರದಲ್ಲಿ ನನ್ನ ಜೊತೆಗೇ ಇದ್ದರು.
ರಂಗಸ್ಥಳದಲ್ಲಿ ಭಾಗವತರಲ್ಲೇ ಮೊದಲಾಗಿ ತಟ್ಟೆಯೊಡ್ಡಿದೆವು. ಭಾಗವತರು ನೀಡಿದ ಹಣ ತಟ್ಟೆಗೆ ಬಿದ್ದಾಗ ನಿಜವಾಗಲೂ ಅಳು ಉಮ್ಮಳಿಸಿ ಬಂತು. ರಂಗದಲ್ಲಿ ಬೇಡುತ್ತಾ ಪದಕ್ಕೆ ಅಭಿನಯಿಸುತ್ತಿರುವಾಗ ಸಭೆಯಿಂದ ಒಬ್ಬರು ಎದ್ದು ಬಂದು ನನ್ನ ತಟ್ಟೆಗೆ ಹಣ ಹಾಕಿದರು.
ಅದನ್ನು ನೋಡುತ್ತಿದ್ದಂತೆ ತಟ್ಟೆಗೆ 50 ರ ನೋಟು ಒಂದು ಬಂದು ಬಿತ್ತು ..
ಅಬ್ಬಾ...ಇದ್ಯಾರೆಂದು ಕಣ್ಣು ಕುಕ್ಕುವ ಬಣ್ಣದ ಲೈಟಿನ ಎಡೆಯಲ್ಲಿ ಇಣುಕಿ ನೋಡಿದರೆ ಆ ಬಿಕ್ಷೆ ಹಾಕಿದವರು ಬೇರಾರೂ ಅಲ್ಲ.
ಎಳವೆಯಲ್ಲಿ ನನ್ನ ಕೈಗೆ ಹಣವನ್ನು ಕೊಟ್ಟು ಭಿಕ್ಷೆ ನೀಡುವ ಮನೋಧರ್ಮ ಬೆಳೆಸಿ ನನ್ನ ಪ್ರತಿಯೋಂದು ಕಾರ್ಯಗಳ ಬೆನ್ನೆಲುಬಾಗಿ ನಿತ್ತಿರುವ ಅದೇ ನನ್ನ ಅಪ್ಪ...
ಹೇಗಿರಬಹುದು ಆ ದೃಶ್ಯ ??ನನ್ನ ಸ್ಥಾನದಲ್ಲಿ ಒಮ್ಮೆ ನೀವು ನಿತ್ತು ಆಲೋಚಿಸಿ .
ಖಂಡಿತಾ ನಿಮ್ಮ ಕಣ್ಣಲ್ಲೂ ನೀರು ಬರದೆ ಇರಲಾರದು.
ಅಪ್ಪ ಕೊಟ್ಟ ಬಿಕ್ಷೆಯನ್ನು ಕಣ್ಣೀರಿಡುತ್ತಲೇ ಸಂತೋಷದಿಂದ ಸ್ವೀಕರಿಸಿದೆ.
ಮತ್ತೆ ಸಭೆಯಲ್ಲಿ ಬೇಡುತ್ತಾ ಹೋದೆ.ಇದು ನಮ್ಮ ಊರಿನಲ್ಲೇ ನಡೆದ ಕಾರಣ ಎಲ್ಲಾ ಪರಿಚಯದವರೇ ಇದ್ದರು.ಒಲ್ಲದ ಮನಸ್ಸಿನಲ್ಲಿ ತಟ್ಟೆ ಚಾಚುತ್ತಾ ಸಭೆಯಲ್ಲಿ ನಡೆದೆ.
ಸಭೆಯ ಮೂಲೆಯಲ್ಲಿ ನನಗೆ ಯಕ್ಷಗಾನ ಹುಚ್ಚಿಡಿಸಿದ ನಮ್ಮ ಬಡೆಕ್ಕಿಲ ಮನೆಯ ನನ್ನ ದೊಡ್ಡಪ್ಪ ಕೈಯಲ್ಲಿ 100 ರ ನೋಟನ್ನು ಹಿಡಿದು ಕಣ್ಣಲ್ಲಿ ನೀರು ತುಂಬಿಸಿಕೊಂಡು ಕುಳಿತಿದ್ದರು.
ದೊಡ್ಡಪ್ಪ ನನ್ನ ಭಿಕ್ಷೆಯ ತಟ್ಟೆಗೆ ಹಣ ಹಾಕುತ್ತಿದ್ದಂತೆ ನನ್ನ ಕೈಗಳೆರಡೂ ದೊಡ್ಡಪ್ಪನ ಕಲ್ಮುಟ್ಟಿದವು.ಕಣ್ಣೀರಿಡುತ್ತಲೇ ನನ್ನ ತಲೆ ಸವರಿದ ದೊಡ್ಡಪ್ಪ ನಿಜವಾಗಿದೆ ಲಾಯ್ಕ ಮಾಡಿದೆ. ಎನ್ನುತ್ತಾ ತಲೆ ನೇವರಿಸುವಾಗ ಒಂದು ಕಿರುನಗೆಯ ಉತ್ತರವನ್ನು ಮಾತ್ರ ಕೊಡಲು ನನ್ನಿಂದ ಸಾಧ್ಯವಾಯ್ತು...
ಹೀಗೆ ನನ್ನ ಪಾತ್ರದ ಪ್ರಥಮ ಪ್ರದರ್ಶನದ ಭಿಕ್ಷೆಯ ಕಥೆ ಅದರೊಳಗಿನ ವ್ಯಥೆ, ಅದೊರಳಿನ ಪಾಠ ಎಲ್ಲವೂ ಎಂದಿಗೂ ಮರೆಯದು.
ಆದರೆ ನನ್ನ ಭಿಕ್ಷೆಯ ಕಥೆ ಇಲ್ಲಿಗೇ ಮುಗಿಯಲಿಲ್ಲ.
ಮಂಗಳೂರಿನ ಸಮೀಪ ಇನ್ನೊಂದು ಪ್ರದರ್ಶನ.
ನಾನು ಮತ್ತೆ ಭಿಕ್ಷೆ ಬೇಡಿತ್ತಾ ಸಭೆಗೆ ಇಳಿದೆ.
ಎಲ್ಲರೂ ನಾನು ಮುಂದು ತಾನು ಮುಂದು ಎನ್ನುವಂತೆ ನನಗೆ ಭಿಕ್ಷೆ ಹಾಕಲು ಕೈಯಲ್ಲಿ ನೋಟನ್ನು ಹಿಡಿದು ಬರುತ್ತಿದ್ದರು.
ನನ್ನ ತಿರುಚಿದ ಮುಖದ ವಿಕಾರ ಮೇಕಪ್ಪಿನ ಜೊತೆಗೆ ನಿತ್ತು ಸೆಲ್ಪಿಯೂ ತೆಗೆಯುತ್ತಿದ್ದರು.
ನಾನು ಬಿಕ್ಷೆ ಬೇಡುತ್ತಾ ಸಭೆಯ ಕೊನೆಗೆ ತಲುಪಿದೆ. ಆದರೆ ಅಲ್ಲಿ ನನ್ನ ಮನಕಲಕುವ ದೃಶ್ಯ ಕಾದಿತ್ತು.
ನಡೆಯಲಿಕ್ಕೆ ಸಾಧ್ಯವಾಗದ ಒಬ್ಬ ನಿಜ ಬಿಕ್ಷುಕ ಅಲ್ಲಿ ತಟ್ಟೆ ಹಿಡಿದು ಕುಳಿತಿದ್ದ .
ಆದರೆ ಬೇಸರ ಏನು ಗೊತ್ತೆ ಅವನ ತಟ್ಟೆಯಲ್ಲಿ 1-2 ರೂ ಗಳ ನಾಣ್ಯಗಳು ಮಾತ್ರ ಬಿದ್ದಿದ್ದವು.
ಒಮ್ಮೆಗೆ ನನ್ನ ತಟ್ಟೆಯನ್ನು ಗಮನಿಸಿಕೊಂಡೆ .
ಹೆಚ್ಚಾಗಿ ಎಲ್ಲಾ 10 ರ ನೋಟುಗಳೇ ಇದ್ದವು.
ಆತ ಬಹಳ ಆಸಕ್ತಿಯಿಂದ ಆಟ ನೋಡುತ್ತಿದ್ದ.
ಅವನಿಗೆ ಬಿಕ್ಷೆ ಹಾಕೂದಕ್ಕಾಗಿ ಅವನ ಬಳಿಗೆ ನಾನು ತೆರಳುತ್ತಿದ್ದೆ.
ಆದರೆ ಆತ ನನ್ನನ್ನು ಬಳಿಗೆ ಕರೆದು ಅವನ ತಟ್ಟೆಯಿಂದ 1ರೂ ನಾಣ್ಯವನ್ನು ನನ್ನ ತಟ್ಟೆಗೆ ಹಾಕಿದ..
ಬೇಸರದ ಕಟ್ಟೆಯೊಡೆಯಿತು. ಸಹಿಸಿಕೊಳ್ಳಲಾಗದೆ ಜೋರು ಅತ್ತು ಬಿಟ್ಟೆ.
ಸಭೆಯ ಮೂಲೆಯ ಅರೆ ಬೆಳಕಿನೆಡೆಯಲ್ಲಿ ಆ ಬಿಕ್ಷುಕ ನನಗೆ ಸಾಕ್ಷಾತ್ ದೇವರಾಗಿಯೇ ಕಂಡ.
ಅವನ ಮನದ ಒಳ್ಳೆಯ ಗುಣ ಆತ ನನಗೆ ಹಣ ಕೊಡುವಾಗ ಇದ್ದ ಮಂದಹಾಸದಲ್ಲಿ ಎದ್ದು ಕಾಣುತ್ತಿತ್ತು.
ನಾನು ಮೊದಲೇ ನಿರ್ಧರಿಸಿದಂತೆ ನನಗೆ ಸಿಕ್ಕ ಭಿಕ್ಷೆಯ ಹಣದಿಂದು ಬಾಚಿ ಒಂದು ಮುಷ್ಠಿ ಹಣವನ್ನು ತೆಗೆದು ಆತನ ಬಟ್ಟಲಲ್ಲಿಟ್ಟೆ.ಆಗ
ಆತನ ಕಣ್ಣುಗಳೂ ಒದ್ದೆಯಾದದ್ದು ಸತ್ಯ.
ಆನಂದದಿಂದ ಎರಡೂ ಕೈಗಳನ್ನು ಮುಗಿದು ಶಿರಬಾಗಿದ.
ಪ್ರತಿ ನಮಸ್ಕರಿಸಿ ಮುನ್ನಡೆದೆ.
ಚೌಕಿಯನ್ನು ಸೇರಿದಾಗಲೂ ಅಲ್ಲಿ ನಡೆದ ಘಟನೆಯಿಂದ ಹೊರ ಬಂದಿರಲಿಲ್ಲ.
ಹಿರಿಯರಾದ ರಮೇಶಣ್ಣ ಏನಾಯ್ತು ಗಣಣ್ಣ ಏನು ಸಪ್ಪೆ ಇದ್ದೀರೆಂದು ಪ್ರಶ್ನಿಸಿದಾಗ ಉತ್ತರಿಸಲಾಗದೆ ವಳನಡೆದೆ.
ಅಬ್ಬಾ......ಮನುಷ್ಯನಾಗಿ ನಾವು ಕಾಣದ ಕಷ್ಟಗಳು, ಅದರೊಳಗಿನ ನೋವುಗಳು, ಎಷ್ಟಿವೆಯೆಂದು ಆ ಗತಿ ನಮಗೆ ಬಂದಾಗಲೇ ತಿಳಿಯೂದು...
ನಾನು ಕೆಲವು ಗಂಟೆಗಳಷ್ಟೇ ಭಿಕ್ಷಾಯಾಟನೆ ನಡೆಸಿದೆ.
ಮತ್ತೆ ಆ ಪಾತ್ರವನ್ನು ಮುಗಿಸಿ, ಮತ್ತೆ ಒಳ್ಳೆಯ ಬಟ್ಟೆ ಬರೆ ಧರಿಸಿ ನನ್ನ ಮನೆಗೆ ತೆರಳುತ್ತೇನೆ.
ಆದರೆ ಆ ಭಿಕ್ಷುಕರಿಗೆ?
ಅವರಿಗೆ ಅದ್ಯಾವದೂ ಇಲ್ಲ .
ಆ ಭಿಕ್ಷೆಯ ಬಟ್ಟಲು ಬಿಟ್ಟರೆ ಮತ್ತೇನು ಗತಿಯಿಲ್ಲವಲ್ಲ..?
ಇದು ನನಗೆ ನಾಗ ನಾಗಿಣಿ ಪ್ರಸಂಗದ ಚಂದ್ರವರ್ಮನ ಪಾತ್ರ ಕಲಿಸಿದ ಉತ್ತಮ ಪಾಠ..
ಹಾಗು ಮರೆಯದ ಘಟನೆ.
ನೊಂದವರ,ಬಿಕ್ಷುಕರ ಮನದ ಅಳಲನ್ನು ಈ ಪಾತ್ರ ನನಗೆ ತಿಳಿಸಿತು.
ಈ ಪಾತ್ರಕ್ಕೆ ಹೇಗೆ ಜೀವ ತುಂಬಿದ್ದೇನೋ ನಾನರಿಯೆ.
ಆದರೆ ಈ ಪಾತ್ರ ನನ್ನ ಜೀವನದಲ್ಲಿ ಕಲಿಸಿದ ಪಾಠವನ್ನಂತೂ ಎಂದಿಗೂ ಮರೆಯೆ...
ಬರಹಗಾರ ಕಲಾವಿದ *ಬ.ಗಣರಾಜ ಭಟ್ ಕೆದಿಲ*


