ಕರಾವಳಿ ಹೆದ್ದಾರಿ ರಾಜ್ಯದ ಆರ್ಥಿಕತೆಗೆ ರಹದಾರಿ ಮಹತ್ವಾಕಾಂಕ್ಷಿ ಯೋಜನೆ 2020-21 ರ ವೇಳೆಗೆ ಪೂರ್ಣ
0
ಡಿಸೆಂಬರ್ 25, 2018
ಕಾಸರಗೋಡು: ರಾಜ್ಯದ ಮಹತ್ವಾಕಾಂಕ್ಷಿ ರಸ್ತೆ ಯೋಜನೆಗಳಲ್ಲಿ ಒಂದಾಗಿರುವ ಕರಾವಳಿ ಹೆದ್ದಾರಿಯು 2021 ರಲ್ಲಿ ಪೂರ್ಣಗೊಳ್ಳಲಿದೆ. ಒಟ್ಟು 657 ಕಿ.ಮೀ ಉದ್ದದ ರಸ್ತೆಯು ಕಾಸರಗೋಡು ಜಿಲ್ಲೆಯ ಮಂಜೇಶ್ವರದಿಂದ ಆರಂಭಗೊಂಡು ತಿರುವನಂತಪುರದ ಪೂವಾರ್ ತನಕ ಸಾಗಲಿದೆ. ಒಟ್ಟು 12 ಮೀ. ಅಗಲದ ಕೋಸ್ಟಲ್ ಹೈವೆ ಒಟ್ಟು ನಾಲ್ಕು ಹಂತಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇರಳ ಲೋಕೋಪಯೋಗಿ ಇಲಾಖೆ ಅಧಿಕೃತರು ತಿಳಿಸಿದ್ದಾರೆ.
ರಾಜ್ಯದ ಒಂಬತ್ತು ಜಿಲ್ಲೆಗಳ ಮೂಲಕ ಹಾದುಹೋಗಲಿರುವ ಕರಾವಳಿ ಹೆದ್ದಾರಿಯು ನಾಡಿನ ಪ್ರಮುಖ ಬಂದರು ಪ್ರದೇಶಗಳನ್ನು ಸುಲಭವಾಗಿ ಸಂಪರ್ಕಿಸುತ್ತದೆ. 7 ಮೀ. ಅಗಲಕ್ಕೆ ಸರಕು ಪಥವನ್ನು ಒಳಗೊಳ್ಳಲಿರುವ ಹೆದ್ದಾರಿಯು ವಲ್ಲರಪಡಂ, ವೀಙಂ ಮತ್ತು ಕೊಲ್ಲಂ ಬಂದರುಗಳಿಗೆ ಸರಕು ಸರಂಜಾಮುಗಳನ್ನು ಪೂರೈಸಲು ಮತ್ತು ತರಲು ಈ ರಸ್ತೆ ಅನುಕೂಲಕರವಾಗಲಿದ್ದು, ಸಮುದ್ರ ತೀರ ಪ್ರದೇಶಗಳ ಸೌಂದರ್ಯವನ್ನು ಅಸ್ವಾದಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.
ಮಹತ್ವಾಕಾಂಕ್ಷಿ ರಸ್ತೆ ನಿರ್ಮಾಣ ಯೋಜನೆಗೆ ಒಟ್ಟು 6,500 ಕೋಟಿ ರೂ. ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿದೆ, ರಸ್ತೆ ನಿರ್ಮಾಣಕ್ಕೆ ಅಗತ್ಯವಾದ ಧನಸಹಾಯವನ್ನು ಕೇರಳ ಮೂಲಸೌಕರ್ಯ ಅಭಿವೃದ್ಧಿ ಹೂಡಿಕೆ ನಿಗಮ(ಕಿಫ್ಬಿ) ಮೂಲಕ ಪೂರೈಸಲಾಗುತ್ತದೆ. ಮೀನುಗಾರಿಕಾ ಅಭಿವೃದ್ಧಿ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ದಟ್ಟನೆಯನ್ನು ಕಡಿಮೆಗೊಳಿಸಲು ಕರಾವಳಿ ಹೆದ್ದಾರಿಯು ಸಹಾಯಕವಾಗಲಿದ್ದು, ಪ್ರವಾಸೋದ್ಯಮ ಅಭಿವೃದ್ಧಿಯಲ್ಲೂ ಈ ರಸ್ತೆ ಯೋಜನೆಯು ಪೂರಕವೆನಿಸಲಿದೆ.
ರಸ್ತೆ ನಿರ್ಮಾಣ ಯೋಜನೆಯ ಬಗ್ಗೆ ರಾಷ್ಟ್ರೀಯ ಸಾರಿಗೆ ಯೋಜನೆ ಮತ್ತು ಸಂಶೋಧನ ಕೇಂದ್ರ(ನ್ಯಾಟ್ಪಾಕ್) ವರದಿ ಸಂಗ್ರಹಿಸಿ ಈಗಾಗಲೇ ಸರಕಾರಕ್ಕೆ ನೀಡಿದೆ. ರಸ್ತೆ ಸಾರಿಗೆ ಸಂಪರ್ಕವನ್ನು ಸುಲಭಸಾಧ್ಯವಾಗಿಸಿ, ಆರ್ಥಿಕ ಅಭಿವೃದ್ಧಿಯ ಲಕ್ಷ್ಯ ಹೊಂದಿರುವ ಕರಾವಳಿ ಹೆದ್ದಾರಿಯು ತಿರುವನಂತಪುರದಿಂದ ಆರಂಭಗೊಂಡು ಮಂಜೇಶ್ವರ ತಾಲೂಕಿನ ತಲಪಾಡಿ ಸಮೀಪದ ಕುಂಜತ್ತೂರು ತನಕ ಇರಲಿದೆ. ಕೊಲ್ಲಂ, ಆಲಪ್ಪುಳ, ಎರ್ನಾಕುಳಂ, ತ್ರಿಶೂರು, ಮಲಪ್ಪುರಂ, ಕಲ್ಲಿಕೋಟೆ, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಮೂಲಕ ರಸ್ತೆ ಸಾಗಲಿದೆ. ನ್ಯಾಟ್ಪಾಕ್ ಕೇಂದ್ರವು ರಸ್ತೆಯನ್ನು ನಾಲ್ಕು ಹಂತದಲ್ಲಿ ನಿರ್ಮಾಣ ಮಾಡಲಾಗುವುದೆಂದು ಹೇಳಿದ್ದು ಪ್ರಥಮ ಹಂತದಲ್ಲಿ 64 ಕಿ.ಮೀ, ದ್ವಿತೀಯ ಹಂತದಲ್ಲಿ 246 ಕಿ.ಮೀ, ತೃತೀಯ ಹಂತದಲ್ಲಿ 104 ಕಿ.ಮೀ ಮತ್ತು ನಾಲ್ಕನೇ ಹಂತದಲ್ಲಿ 43 ಕಿ.ಮೀ ಕರಾವಳಿ ಹೆದ್ದಾರಿ ರಸ್ತೆ ನಿರ್ಮಾಣ ನಡೆಯಲಿದೆ. ಒಟ್ಟು 14 ಪ್ರಮುಖ ಸೇತುವೆಗಳು ಸಹಿತ ನಾಲ್ಕು ಫ್ಲೈ ಓವರ್‍ಗಳು ಕರವಾಳಿ ಹೆದ್ದಾರಿಯನ್ನು ಜೋಡಿಸಲಿವೆ.
ಕೇರಳದ ರಸ್ತೆ ಯೋಜನೆಗಳಲ್ಲಿ ಪ್ರಮುಖವಾಗಿರುವ ಮಲೆನಾಡು ಹೈವೆ ಮತ್ತು ಕರಾವಳಿ ಹೈವೆ ಯೋಜನೆಗಳು ರಾಜ್ಯದ ರಸ್ತೆ ಸಂಪರ್ಕ ಚಿತ್ರಣವನ್ನು ಬದಲಾಯಿಸಲಿದ್ದು, ವ್ಯಾಪಾರ ವಹಿವಾಟು, ಸರಕು ಸರಂಜಾಮುಗಳ ಶೀಘ್ರ ವಿಲೇವಾರಿ ಸಹಿತ ಮೀನುಗಾರಿಕೆ ಮತ್ತು ಪ್ರವಾಸೋದ್ಯಮಕ್ಕೆ ಹೆಚ್ಚಿನ ಪುಷ್ಠಿ ನೀಡಲಿದೆ ಎಂದು ನಂಬಲಾಗಿದೆ.
ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಸ್ಥಳದ ಭೂ ಸ್ವಾಧೀನ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಸ್ಥಳೀಯ ಜನಪ್ರತಿನಿಧಿಗಳ ಮುಂದಾಳುತ್ವದಲ್ಲಿ ಸಮಿತಿಯನ್ನು ರಚಿಸಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಕರಾವಳಿ ಹೆದ್ದಾರಿಯು 57 ಕಿ.ಮೀ ಇರಲಿದ್ದು, 2021 ರ ವೇಳೆಗೆ ರಸ್ತೆ ನಿರ್ಮಾಣ ಪೂರ್ಣಗೊಳ್ಳಲಿದೆ ಎಂದು ಕಿಫ್ಬಿ ಪ್ರಧಾನ ವ್ಯವಸ್ಥಾಪಕ ಸುನಿಲ್ ಕುಮಾರ್ ಹೇಳಿದ್ದಾರೆ.
ಏನಂತಾರೆ:
ನೂತನ ಕರಾವಳಿ ಮತ್ತು ಮಲೆನಾಡು ಹೆದ್ದಾರಿಯು ಜಿಲ್ಲೆ ಮತ್ತು ರಾಜ್ಯದ ಚಿತ್ರಣವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ. ರಸ್ತೆ ಅಭಿವೃದ್ಧಿಯ ಮೂಲಕ ಜಿಲ್ಲೆಯ ಆರ್ಥಿಕತೆಗೆ ಹೆಚ್ಚಿನ ಪುಷ್ಠಿ ಸಿಗಲಿದೆ. ಮೀನುಗಾರಿಕೆ, ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಲಿದೆ. ಕಾಲಮಿತಿಯೊಳಗೆ ಸರಕುಗಳನ್ನು ಹೊತ್ತ ಘನವಾಹನಗಳು ಹೆದ್ದಾರಿಯ ಮೂಲಕ ನಿರ್ದಿಷ್ಟ ಸ್ಥಳಗಳಿಗೆ ತಲುಪಬಹುದಾಗಿದೆ. ಭೂ ಸ್ವಾಧೀನ ಪ್ರಕ್ರಿಯೆ ಜಿಲ್ಲೆಯಲ್ಲಿ ಆರಂಭಗೊಂಡಿದ್ದು, ಜನ ಸಹಭಾಗಿತ್ವದ ಮೂಲಕ ರಸ್ತೆಗೆ ಅಗತ್ಯವಾದ ಭೂಮಿ ಹಸ್ತಾಂತರಗೊಳ್ಳಲಿದೆ, ಹೆದ್ದಾರಿಯು ಹೊಸ ಆರ್ಥಿಕತೆಗೆ ರಹದಾರಿಯಾಗಬಹುದೆಂಬ ವಿಶ್ವಾಸ ಜನಸಾಮಾನ್ಯರಿಗಿದೆ.
-ಇ.ಚಂದ್ರಶೇಖರನ್
ವಸತಿ ನಿರ್ಮಾಣ ಮತ್ತು ಕಂದಾಯ ಸಚಿವ ಕೇರಳ ಸರಕಾರ
.................................................................................................................
ಹೈಲೈಟ್ಸ್:
ಕರಾವಳಿ ಹೆದ್ದಾರಿಯ ಒಟ್ಟು ಉದ್ದ-657 ಕಿ.ಮೀ
ನಿರ್ಮಾಣ ವೆಚ್ಚ ಅಂದಾಜು-6500 ಕೋಟಿ ರೂ.
ಒಟ್ಟು 9 ಜಿಲ್ಲೆಗಳ ಮೂಲಕ ಹಾದುಹೋಗುವ ರಸ್ತೆ
ಆಯಾ ಜಿಲ್ಲೆಗಳ ರಸ್ತೆ ಉದ್ದ ಕಿ.ಮೀ ಗಳಲ್ಲಿ
ತಿರುವನಂತಪುರ-77.8 ಕಿ.ಮೀ
ಕೊಲ್ಲಂ-53.6 ಕಿ.ಮೀ
ಆಲಪ್ಪುಳ-82.7 ಕಿ.ಮೀ
ಎರ್ನಾಕುಳಂ-62.6 ಕಿ.ಮೀ
ತ್ರಿಶೂರು-59.3 ಕಿ.ಮೀ
ಮಲಪ್ಪುರಂ-69.7 ಕಿ.ಮೀ
ಕಲ್ಲಿಕೋಟೆ-73.5 ಕಿ.ಮೀ
ಕಣ್ಣೂರು-85.5 ಕಿ.ಮೀ
ಕಾಸರಗೋಡು-85.3 ಕಿ.ಮೀ
-ಪ್ರಮುಖ ಬಂದರುಗಳಿಗೆ ಸಂಪರ್ಕ
-ರಾ.ಹೆದ್ದಾರಿಯಲ್ಲಿ ವಾಹನ ದಟ್ಟನೆ ಹಾಗೂ ಮಾಲಿನ್ಯವನ್ನು ಕಡಿಮೆಗೊಳಿಸಲು ಸಹಕಾರಿಯಾಗಲಿದೆ




