ಮಾನವನು ಮಾನವೀಯ ಮೌಲ್ಯಗಳಿಗೆ ಬೆಲೆ ಕೊಡಬೇಕು= ಮೂಸಾಕುಂಞÂ ನಾಯರ್‍ಮೂಲೆ ಕ್ರಿಸ್ಮಸ್ ಮಿನದನ ಉದ್ಘಾಟಿಸಿ ಅಭಿಮತ
0
ಡಿಸೆಂಬರ್ 25, 2018
ಮಂಜೇಶ್ವರ: ರಾಷ್ಟ್ರದ ಇತರೆಡೆಗಳಿಗಿಂತ ತುಳು ನಾಡಿನ ಜನರಲ್ಲಿ ವಿಶೇಷ ಸಾಮರಸ್ಯವಿದೆ. ಎಲ್ಲಾ ಧರ್ಮದವರು ಅವರವರ ಧರ್ಮದಲ್ಲಿ ನಂಬಿಕೆ ವಿಶ್ವಾಸವಿರಿಸಿ ನಂಬಿಕೆ=ವಿಶ್ವಾಸಗಳ ಮೂಲಕ ಜೊತೆಯಾಗಿ ಬದುಕುವುದು ಇಲ್ಲಿಯ ವಿಶೇಷವಾಗಿದೆ. ವರ್ತಮಾನದ ಜಗತ್ತಿಗೆ ಪರಸ್ಪರ ಅರಿತು ಜೊತೆಯಾಗಿ ಬೆಸೆದು ಬದುಕುವ ಅಗತ್ಯ ತುರ್ತು ಬೇಕಿದೆ ಎಂದು ಕರ್ನಾಟಕದ ನಿವೃತ್ತ ಜಿಲ್ಲಾ ಮತ್ತು ಸೆಶನ್ಸ್ ಜಡ್ಜ್ ಹಾಗೂ ಕರ್ನಾಟಕ ಲೋಕಾಯುಕ್ತ ನಿವೃತ್ತ ರಿಜಿಸ್ಟ್ರಾರ್ ಮೂಸಾ ಕುಂಞÂ ನಾಯರ್‍ಮೂಲೆ ತಿಳಿಸಿದರು.
ಕೇರಳ ತುಳು ಅಕಾಡೆಮಿಯ ವತಿಯಿಂದ ಸೋಮವಾರ ವರ್ಕಾಡಿ ಮುರತ್ತಣೆಯಲ್ಲಿ ಆಯೋಜಿಸಲಾಗಿದ್ದ ತುಳು ಕ್ರಿಸ್ಮಸ್ ಮಿನದನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಸೆಯುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ಆಗಬೇಕಿದೆ. ತುಳುನಾಡಿನ ಸಾಮರಸ್ಯದ ಬದಕಿನ ಪರಂಪರೆಯನ್ನು ಮುಂದುವರಿಸುವ ಹೊಸ ತಲೆಮಾರಿಗೆ ಸ್ಪಷ್ಟ ಮಾರ್ಗದರ್ಶನ ಈ ಮೂಲಕ ಲಭ್ಯವಾಗಲಿ ಎಂದು ಅವರು ತಿಳಿಸಿದರು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಎಂ.ಉಮೇಶ ಸಾಲ್ಯಾನ್ ಕಾಸರಗೋಡು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ತುಳು ಭಾಷೆಗೆ ಕ್ರೈಸ್ತ ಮಿಷನರಿಗಳ ಕೊಡುಗೆ ಎಂಬ ವಿಷಯದ ಕುರಿತು ವರ್ಕಾಡಿ ಚರ್ಚಿನ ಧರ್ಮಗುರು ರೆ. ಫಾ. ಫ್ರಾನ್ಸಿಸ್ ರೊಡ್ರಿಗಸ್ ವಿಚಾರ ಮಂಡನೆ ಮಾಡಿದರು. ಬಾಸೆಲ್ ಮಿಶನರಿ ಕಾಲಘಟ್ಟದಲ್ಲಿ ತುಳು ಭಾಷೆಗೆ, ತುಳು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ದೊರೆತಿದೆ. ಅವರು ತುಳು ಭಾಷೆಯನ್ನು ಕಲಿತು ಇತರ ಸಾಹಿತ್ಯವನ್ನು ತುಳು ಭಾಷೆಗೆ ಭಾಷಾಂತರ ಮಾಡಿ ತುಳು ನಿಘಂಟು ರಚಿಸಿ ಸಾಹಿತ್ಯ ಕೃಷಿ ಮಾಡಿದ್ದಾರೆ ಎಂದು ಹೇಳಿದರು. ಈ ಊರಿನ ಕ್ರೈಸ್ತ ಭಾಂಧವರು, ಮುಸ್ಲಿಂ ವರ್ಗ, ಬ್ರಾಹ್ಮಣರು,ಈಳವರು,ಮೊಗವೀರರು ಕೂಡಾ ಹೆಚ್ಚಾಗಿ ತುಳು ಭಾಷೆಯಲ್ಲಿಯೇ ವ್ಯವಹಾರ ಮಾಡುತ್ತಾರೆ. ತುಳು ಭಾಷೆ ಸಮೃದ್ಧ ಭಾಷೆ, ತುಳು ಭಾಷೆ ಇನ್ನಷ್ಟು ಬೆಳಗಲಿ ಎಂದು ಆಶಿಸಿದರು.
ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯೆ ತುಳಸಿಕುಮಾರಿ, ಸೀತಾ, ಇಂದಿರಾ, ಭಾರತಿ, ಮೀಂಜ ಗ್ರಾಮ ಪಂಚಾಯತಿ ಸದಸ್ಯೆ ಶೋಭಾ ಸೋಮಪ್ಪ, ವರ್ಕಾಡಿ ಕೃಷಿ ವಿಜ್ಞಾನ ಕೇಂದ್ರದ ಪ್ರೊಫೆಸರ್ ಗಿರಿಧರ್, ವರ್ಕಾಡಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ ದಿವಾಕರ ಎಸ್.ಜೆ ಮೊದಲಾದವರು ಶುಭಾಶಂಸನೆಗೈದರು. ಅಕಾಡೆಮಿಯ ಸದಸ್ಯೆ ಭಾರತಿ ಬಾಬು ಪ್ರಾರ್ಥನೆ ಹಾಡಿದರು.ಕಾರ್ಯದರ್ಶಿ ವಿಜಯ ಕುಮಾರ್ ಪಾವಳ ಸ್ವಾಗತಿಸಿ, ಕಾರ್ಯಕಾರಿ ಸಮಿತಿಯ ಸದಸ್ಯೆ ಗೀತಾ.ವಿ.ಸಾಮಾನಿ ವಂದಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯ ರಾಮಕೃಷ್ಣ ಕಡಂಬಾರ್ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿಯ ಸದಸ್ಯ ಬಾಲಕೃಷ್ಣ ಶೆಟ್ಟಿಗಾರ್,ವಿಶ್ವನಾಥ ಕುದುರು,ರಾಜೀವಿ ಕಳಿಯೂರು, ಉಪಸ್ಥಿತರಿದ್ದರು. ವಿಶೇಷ ಆಕರ್ಷಣೆಯಾಗಿ ಬಜ್ಪೆಯ ಥಂಡರ್ ಗೈಯ್ಸ್ ಫೌಂಡೇಶನ್ ತಂಡದವರಿಂದ ಕ್ರಿಸ್ಮಸ್ ಸಾಂಸ್ಕೃತಿಕ ವೈವಿಧ್ಯಗಳು ನಡೆಯಿತು.


