ಮಕ್ಕಳಲ್ಲಿ ಪರಿಸರ ಜಾಗೃತಿಗೆ ಪರಿಸರ-ಪಕ್ಷಿ ವೀಕ್ಷಣೆ
0
ಡಿಸೆಂಬರ್ 21, 2018
ಕುಂಬಳೆ: ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಮನುಷ್ಯನಿಂದಲೂ ಹೆಚ್ಚು ಇತರ ಜೀವಜಾಲಗಳ ಪಾತ್ರ ಮಹತ್ವವಾದುದು. ಪರಿಸರ ವ್ಯವಸ್ಥೆಯ ಸಮತೋಲನವು ಪಕ್ಷಿ-ಕೀಟಗಳು, ದುಂಬಿ, ಚಿಟ್ಟೆಗಳ ಇರುವಿಕೆಯಿಂದ ಲೆಕ್ಕ ಹಾಕಬಹುದು. ವಿದ್ಯಾರ್ಥಿಗಳಿಗೆ ಈ ಬಗೆಗಿನ ಅರಿವು, ಪರಿಸರ ಕಾಳಜಿ ಮೂಡಿಸುವಲ್ಲಿ ಪರಿಸರ ವೀಕ್ಷಣೆ ಹೆಚ್ಚು ಪ್ರಯೋಜನಕಾರಿ ಎಂದು ನಿವೃತ್ತ ವಿಜ್ಞಾನ ಶಿಕ್ಷಕ ರಾಜೀವ್ ಅಭಿಪ್ರಾಯಪಟ್ಟರು.
ಇಚ್ಲಂಪಾಡಿ ಹಿರಿಯ ಬುನಾದಿ ಶಾಲೆಯಲ್ಲಿ ಇತ್ತೀಚೆಗೆ ನಡೆದ ಪಕ್ಷಿ ವೀಕ್ಷಣೆಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರದೊಂದಿಗೆ ಬೆರೆಯವುದರೊಂದಿಗೆ ಮನಸ್ಸು ಸ್ವಚ್ಛವಾಗಿರುತ್ತದೆ. ಭಾವನೆಗಳು ಉತ್ತಮವಾಗಿದ್ದರೆ ಜೀವನವೂ ಹೂವಿನಂತೆ ಅರಳುತ್ತದೆ ಎಂದು ಅವರು ತಿಳಿಸಿದರು.
ಕಾಸರಗೋಡಿನ ಪ್ರಮುಖ ಪಕ್ಷಿ ನಿರೀಕ್ಷಕ ಮಾಕ್ಸಿಂ ಕೊಲ್ಲಂಗಾನ ಹಾಗೂ ರಾಜು ಕಿದೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಶಿಬಿರದ ವಿದ್ಯಾರ್ಥಿಗಳಿಗೆ ಒಟ್ಟು ನಲ್ವತ್ತೆರಡು ಪಕ್ಷಿಗಳನ್ನು ಗುರುತಿಸಲು ಸಹಕರಿಸಿದರು. ಪಶ್ಚಿಮ ಘಟಕ್ಕೆ ಸೀಮಿತವಾಗಿರುವ ಗ್ರೇ ಹೆಡ್ಡೆಡ್ ಬುಲ್ ಬುಲ್, ಸ್ಕಿಮಿಟರ್ ಬಾಬ್ಲರ್ ಹಾಗೂ ರೂಫುಸ್ ಬಾಬ್ಲರ್‍ಗಳನ್ನು ವಿದ್ಯಾರ್ಥಿಗಳು ವೀಕ್ಷಿಸಿದರು. ಯುರೋಪಿನಿಂದ ವಲಸೆ ಬಂದ ಗ್ರೀನ್ ವಾಬ್ರ್ಲರ್ ಎಂಬ ಗುಬ್ಬಚ್ಚಿ ಗಾತ್ರದ ಬಾನಾಡಿಯನ್ನೂ ಸಹಶಿಬಿರದ ವಿದ್ಯಾರ್ಥಿಗಳಿಗೆ ನೋಡುವ ಅವಕಾಶ ಈ ಸಂದರ್ಭ ದೊರೆಯಿತು.
ಬಳಿಕ ಉರಗ ತಜ್ಞ ಪೆÇಸಡಿಗುಂಪೆ ನಿವಾಸಿ ರಾಂ ಪ್ರಕಾಶ್ ಅವರು ಪರಿಸರದಲ್ಲಿ ಕಂಡುಬರುವ ಹಾವುಗಳ ಬಗ್ಗೆ ಮಾಹಿತಿ ನೀಡಿದರು. ಹಾವು ಕಚ್ಚಿದ ಸಂದರ್ಭ ಮಾಡಬೇಕಾದ ಮುಂಜಾಗ್ರತಾ ಕ್ರಮ ಹಾಗೂ ಪ್ರಥಮ ಚಿಕಿತ್ಸೆಯನ್ನೂ ತಿಳಿಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯ ರಾಧಾಕೃಷ್ಣ ತುಂಗ ಹಾಗೂ ಅಧ್ಯಾಪಕ ವೃಂದದವರು ಸಹಕರಿಸಿದರು.


