ಮಂಜೇಶ್ವರಕ್ಕೆ ಶೀಘ್ರದಲ್ಲೇ ಹೊಸ ಸಬ್ ಆರ್‍ಟಿಒ ಕಚೇರಿ(ಉಪ ರಸ್ತೆ ಸಾರಿಗೆ ಕಚೇರಿ)
0
ಡಿಸೆಂಬರ್ 25, 2018
ಕಾಸರಗೋಡು: ಮಂಜೇಶ್ವರ ತಾಲೂಕು ಕೇಂದ್ರೀಕರಿಸಿ ಶೀಘ್ರದಲ್ಲೇ ಸಬ್ ಆರ್‍ಟಿಒ ಕಚೇರಿಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಮಂಜೇಶ್ವರ ತಾಲೂಕಿನ ಹೊರತಾಗಿ ಪಯ್ಯನ್ನೂರು ಸೇರಿದಂತೆ ರಾಜ್ಯದ ಒಟ್ಟು ಒಂಭತ್ತು ತಾಲೂಕುಗಳಲ್ಲಿ ಸಬ್ ಆರ್‍ಟಿಒ ಕಚೇರಿಗಳನ್ನು ತೆರೆಯಲು ಕೇರಳ ರಾಜ್ಯ ಸಾರಿಗೆ ಇಲಾಖೆ ತೀರ್ಮಾನಿಸಿದೆ. ಇದಕ್ಕಾಗಿ ಸರಕಾರವು 150 ಲಕ್ಷ ರೂ. ಗಳನ್ನು ಮಂಜೂರು ಮಾಡಿದೆ.
ಹೊಸದಾಗಿ ಸ್ಥಾಪಿಸಲಾಗುವ ಸಬ್ ಆರ್‍ಟಿಒ (ಉಪ ರಸ್ತೆ ಸಾರಿಗೆ ಕಚೇರಿ)ಗೆ 189 ಅಸಿಸ್ಟೆಂಟ್ ಮೋಟಾರ್ ವೆಹಿಕಲ್ ಇನ್‍ಸ್ಪೆಕ್ಟರ್‍ಗಳನ್ನು ನೇಮಿಸಲು ನಿರ್ಧರಿಸಲಾಗಿದೆ. ಹೀಗೆ ಆ ಹುದ್ದೆಗೆ ಆಯ್ಕೆಯಾದವರಿಗೆ ಅಗತ್ಯದ ತರಬೇತಿಯನ್ನು ನೀಡಲಾಗುತ್ತಿದೆ.
ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಬೇಕಾಗಿರುವ ಉಪ ರಸ್ತೆ ಸಾರಿಗೆ ಕಚೇರಿ ಕುರಿತಾದ ಪೂರ್ಣ ಮಾಹಿತಿಗಳನ್ನು ಒಳಗೊಂಡ ವರದಿಯನ್ನು ದಕ್ಷಿಣ ಮತ್ತು ಉತ್ತರ ವಲಯಗಳ ಉಪ ಸಾರಿಗೆ ಆಯುಕ್ತರು ರಾಜ್ಯ ಸಾರಿಗೆ ಆಯುಕ್ತರಿಗೆ ಈಗಾಗಲೇ ಸಲ್ಲಿಸಿದ್ದಾರೆ. ನೂತನ ಉಪ ಸಾರಿಗೆ ಕಚೇರಿಯನ್ನು ಆರಂಭಿಸಬೇಕಾಗಿರುವ ಅಗತ್ಯ, ಅದಕ್ಕೆ ತಗಲುವ ವೆಚ್ಚ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಪ್ರತೀ ತಾಲೂಕುಗಳಲ್ಲೂ ಸಬ್ ಆರ್‍ಟಿಒ ಕಚೇರಿಗಳನ್ನು ಸ್ಥಾಪಿಸಬೇಕೆಂದಿದ್ದರೂ, ಮಂಜೇಶ್ವರ ತಾಲೂಕಿನಲ್ಲಿ ಇಲ್ಲಿಯವರೆಗೆ ಕಚೇರಿಯನ್ನು ಸ್ಥಾಪಿಸಲಾಗಿಲ್ಲ. ಸಬ್ ಆರ್‍ಟಿಒ ಕಚೇರಿ ಸ್ಥಾಪಿಸಬೇಕೆಂಬ ಬೇಡಿಕೆಯನ್ನು ಮಂಜೇಶ್ವರ ತಾಲೂಕಿನವರು ನಿರಂತರವಾಗಿ ಸರಕಾರದ ಮುಂದಿರಿಸುತ್ತಾ ಬಂದಿದ್ದಾರೆ. ಆ ಬೇಡಿಕೆಗೆ ಸರಕಾರವು ಕೊನೆಗೂ ಮನ್ನಣೆ ನೀಡಿದೆ. ಇದರಂತೆ ಮಂಜೇಶ್ವರ ತಾಲೂಕಿಗೆ ಒಳಪಟ್ಟವರು ಇನ್ನು ಮುಂದೆ ಹೊಸ ವಾಹನಗಳನ್ನು ಖರೀದಿಸಿದಾಗ ಅದನ್ನು ಮಂಜೇಶ್ವರ ಸಬ್ ಆರ್‍ಟಿಒ ಕಚೇರಿಯಲ್ಲೇ ನೋಂದಾಯಿಸಬಹುದು. ವಾಹನ ತೆರಿಗೆ ಪಾವತಿ ಹಾಗೂ ಲೈಸನ್ಸ್ ಮುಂತಾದವುಗಳನ್ನು ಇದೇ ಕಚೇರಿಯಿಂದಲೇ ಪಡೆದುಕೊಳ್ಳಬಹುದು.


