ಶಬರಿಮಲೆ ಆಚಾರ ಅನುಷ್ಠಾನ ಸಂರಕ್ಷಣೆಗೆ ರಾಜ್ಯಾದ್ಯಂತ ಕಹಳೆ ಮೊಳಗಿಸಿದ ಅಯ್ಯಪ್ಪ ಜ್ಯೋತಿ
0
ಡಿಸೆಂಬರ್ 26, 2018
ಕಾಸರಗೋಡು: ಶಬರಿಮಲೆಯ ಆಚಾರ-ಅನುಷ್ಠಾನಗಳನ್ನು ಸಂರಕ್ಷಿಸಬೇಕೆಂದು ಆಗ್ರಹಿಸಿ ಕಾಸರಗೋಡಿನ ಹೊಸಂಗಡಿಯಿಂದ ಕನ್ಯಾಕುಮಾರಿ ತ್ರಿವೇಣಿ ಸಂಗಮ ತನಕ ಅತ್ಯಪೂರ್ವ ಅಯ್ಯಪ್ಪ ಜ್ಯೋತಿ ಬೆಳಗುವಿಕೆ ಬುಧವಾರ ಸೂರ್ಯಾಸ್ತಮಾನದ ವೇಳೆ ನಡೆಯಿತು.
ಕಾಸರಗೋಡು ಹೊಸಂಗಡಿ ಶ್ರೀ ಧರ್ಮಶಾಸ್ತಾ ಕ್ಷೇತ್ರದಲ್ಲಿ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗನಾಂದ ಸ್ವರಸ್ವತೀ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಅತ್ಯಪೂರ್ವ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಪ್ರತೀ ಮೀಟರ್‍ನಲ್ಲಿ ತಲಾ ಓರ್ವರಂತೆ ಹೆದ್ದಾರಿ ಬದಿಯುದ್ದಕ್ಕೂ ಅಯ್ಯಪ್ಪ ಜ್ಯೋತಿ ಬೆಳಗಿಸಲು ಸಾಲಾಗಿ ನಿಂತು ಕನ್ಯಾಕುಮಾರಿ ತ್ರಿವೇಣಿ ಸಂಗಮ ತನಕ ವ್ಯವಸ್ಥೆ ಸಜ್ಜುಗೊಳಿಸಲಾಗಿತ್ತು. ಈ ಅಯ್ಯಪ್ಪ ಜ್ಯೋತಿಯಲ್ಲಿ ಸುಮಾರು 10ಲಕ್ಷ ಮಂದಿ ಭಕ್ತರು ಪಾಲ್ಗೊಂಡಿರುವರೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಕೇರಳ-ತಮಿಳುನಾಡು ಗಡಿ ಪ್ರದೇಶವಾದ ಕಳುಮಿಕಾಲಿಲ್‍ನಲ್ಲಿ ಅಯ್ಯಪ್ಪ ಜ್ಯೋತಿಯನ್ನು ರಾಜ್ಯ ಸಭಾ ಸದಸ್ಯ ಸುರೇಶ್ ಗೋಪಿ ದೀಪ ಬೆಳಗಿಸಿ ಉದ್ಘಾಟಿಸಿದರು.
ರಾಜ್ಯದಲ್ಲಿ ಅಯ್ಪಪ್ಪ ಜ್ಯೋತಿಯ ಅಂಗವಾಗಿ ಕಾಸರಗೋಡು ಜಿಲ್ಲೆ ಸಹಿತ ರಾಜ್ಯದ 250 ಕೇಂದ್ರಗಳಲ್ಲಿ ವಿಶ್ವಾಸ ಸಂರಕ್ಷಣಾ ಸಮ್ಮೇಳನಗಳು ನಡೆಯಿತು. ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ವಿದೇಶಗಳಲ್ಲೂ ಬುಧವಾರ ಅಯ್ಯಪ್ಪ ಭಕ್ತರು ಅಯ್ಯಪ್ಪ ಜ್ಯೋತಿ ಬೆಳಗಿಸಿದರು. ಕಾಸರಗೋಡು ಹೊಸಂಗಡಿಯಿಂದ ಕನ್ಯಾಕುಮಾರಿ ತ್ರಿವೇಣಿ ಸಂಗಮ ತನಕ ರಾಜ್ಯದ 795 ಕಿಲೋ ಮೀಟರ್ ತನಕ ಬುಧವಾರ ಸಂಜೆ ಅಯ್ಯಪ್ಪ ಜ್ಯೋತಿ ಬೆಳಗಲಾಯಿತು. ವಿವಿಧ ಪ್ರಧಾನ ಕೇಂದ್ರಗಳಲ್ಲಿ ಸಂಜೆ 5 ಗಂಟೆಗೆ ವಿಶ್ವಾಸ ಸಂರಕ್ಷಣಾ ಕಾರ್ಯಕ್ರಮ ನಡೆಯಿತು. ಬಳಿಕ ಸಂಜೆ 6 ಗಂಟೆಗೆ ದೀಪ ಬೆಳಗಿಸಿ ಹತ್ತು ನಿಮಿಷಗಳ ಕಾಲ ರಸ್ತೆ ಬದಿಯಲ್ಲಿ ಅಯ್ಯಪ್ಪ ಜ್ಯೋತಿ ಸ್ವಾಮಿಯೇ ಶರಣಂ ಘೋಷಣೆಯೊಂದಿಗೆ ಚಳವಳಿ ರೂಪ ಪಡೆಯಿತು.
ಇದರಂಗವಾಗಿ ಕಾಸರಗೋಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತೀ 100ಮೀಟರ್ ಅಂತರದಲ್ಲಿ ಅಯ್ಯಪ್ಪ ಭಕ್ತರು, ಸನಾತನ ಧರ್ಮ ವಿಶ್ವಾಸಿಗಳು ಹಣತೆಯಲ್ಲಿ ಎಳ್ಳಣ್ಣೆ ಹಾಕಿ ದೀಪ ಜ್ವಲಿಸಿದರು.
ಕಾಸರಗೋಡು ನಗರದ ಕರಂದಕ್ಕಾಡ್‍ನ ವೀರ ಹನುಮಾನ್ ಭಜನಾ ಮಂದಿರ ಪರಿಸರದಲ್ಲಿ ಚಿನ್ಮಯ ಮಿಶನ್‍ನ ವಿವಿಕ್ತಾನಂದ ಸರಸ್ವತಿ ಸ್ವಾಮೀಜೀ ದೀಪ ಪ್ರಜ್ವಲಿಸುವ ಮೂಲಕ ಜ್ಯೋತಿ ಬೆಳಗಲು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಕರುಣಾಕರನ್ ನಂಬ್ಯಾರ್, ನ್ಯಾಯವಾದಿ ರವೀಂದ್ರನ್, ಸಿ.ವಿ.ಪೆÇದುವಾಳ್, ಆರ್‍ಎಸ್‍ಎಸ್‍ನ ದಿನೇಶ್ ಮಡಪ್ಪುರ, ಮಂಜುನಾಥ ಪೂಜಾರಿ ಮೊದಲಾದವರಿದ್ದರು. ರಸ್ತೆಯುದ್ದಕ್ಕೂ ನಿಂತು ಜ್ಯೋತಿ ಬೆಳಗಿದ ಬಳಿಕ ಶರಣಂ ಅಯ್ಯಪ್ಪ ಮಂತ್ರವನ್ನು ಜಪಿಸಿದರು. ಸಂಜೆ 6 ರಿಂದ 6.30 ರ ವರೆಗೆ ಜ್ಯೋತಿ ಬೆಳಗಿಸಿ ಅಯ್ಯಪ್ಪ ಘೋಷಣೆ ಮೊಳಗಿಸಿದರು. ಹೊಸಂಗಡಿಯಿಂದ 795 ಕಿ.ಮೀ. ದೂರಕ್ಕೆ ಭಕ್ತರು ಸಾಲುಗಟ್ಟಿ ನಿಂತು ಅಯ್ಯಪ್ಪ ಜ್ಯೋತಿಯನ್ನು ಬೆಳಗಿ ಕೇರಳ ಸರಕಾರದ ಶಬರಿಮಲೆಗೆ ಸಂಬಂಧಿಸಿದ ನೀತಿಯನ್ನು ಪ್ರತಿಭಟಿಸಿದರು.
ಮಂಜೇಶ್ವರ: ಹೊಸಂಗಡಿಯಿಂದ ಕನ್ಯಾಕುಮಾರಿ ತ್ರಿವೇಣಿ ಸಂಗಮ ತನಕ ಅತ್ಯಪೂರ್ವ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮದ ಹೊಸಂಗಡಿಯಲ್ಲಿ ನಡೆದ ಚಾಲನಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀಗಳು ದೀಪ ಬೆಳಗಿಸಿದರು. ಉತ್ತರಕಾಶಿ ಮಠದ ಶ್ರೀರಾಮಚಂದ್ರ ಶ್ರೀಗಳು ಉಪಸ್ಥಿತರಿದ್ದರು.



