ಕುಂಬ್ಡಾಜೆ ಗ್ರಾಮ ಪಂಚಾಯಿತಿನಿಂದ ಕ್ರೀಡೆಗೆ ಪ್ರೋತ್ಸಾಹ
0
ಡಿಸೆಂಬರ್ 21, 2018
ಬದಿಯಡ್ಕ : ಸರಕಾರದ ಆದೇಶದಂತೆ ರಾಜ್ಯದ ಎಲ್ಲಾ ಗ್ರಾಮ ಪಂಚಾಯತುಗಳಲ್ಲೂ ಕ್ರೀಡಾಳುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ಚಟುವಟಿಕೆಗಳನ್ನು ಪ್ರಾರಂಭಿಸಲಾಗಿದೆ. ಪಂಚಾಯತಿಗೊಳಪಟ್ಟ ಕ್ರೀಡಾಳುಗಳಿಗೆ ಅವಕಾಶವನ್ನು ಸೃಷ್ಟಿಸಿ ಉತ್ತಮ ಆಟಗಾರರನ್ನು ಗುರುತಿಸಿ ಹೆಚ್ಚಿನ ತರಬೇತಿ ನೀಡಿ ಕ್ರೀಡಾರಂಗದಲ್ಲಿನ ಅವಕಾಶಗಳನ್ನು ಸದುಪಯೋಗಪಡಿಸುವಂತೆ ಪೇರೇಪಿಸುವ ಉದ್ದೇಶದೊಂದಿಗೆ ರೂಪೀಕರಿಸಲಾದ ಯೋಜನೆ ಇದಾಗಿದೆ.
ಈ ನಿಟ್ಟಿನಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯತು ವಾಲಿಬಾಲ್ ಕ್ರೀಡೆಯನ್ನು ಆಯ್ಕೆ ಮಾಡಿ ಆಸಕ್ತ ಆಟಗಾರರಿಗೆ ಆಡುವ ಹಾಗೂ ಪಂಚಾಯತಿನ ಕ್ರೀಡಾಪ್ರೇಮಿಗಳಿಗೆ ನೋಡಿ ಆನಂದಿಸುವ ಅವಕಾಶವನ್ನು ಇತ್ತೀಚೆಗೆ ಆಯೋಜಿಸಿತ್ತು. ವಾಲಿಬಾಲ್ ಲೀಗ್‍ಗಾಗಿ ಪಂಚಾಯತಿಗೊಳಪಟ್ಟ 60 ವಾಲಿಬಾಲ್ ಆಟಗಾರರನ್ನು ಸುಮಾರು 10 ಆಟಗಾರರನ್ನೊಳಗೊಂಡ ಆರು ತಂಡಗಳಾಗಿ ರೂಪೀಕರಿಸಿ ಪ್ರತಿಯೊಂದು ತಂಡಕ್ಕೂ ಉಳಿದ ಐದು ತಂಡಗಳೊಂದಿಗೂ ಆಡುವ ಅವಕಾಶವನ್ನು ನೀಡಲಾಯಿತು.
ಗ್ರಾಮ ಪಂಚಾಯತು ಸದಸ್ಯರೇ ತಂಡಗಳ ನೇತೃತ್ವ ವಹಿಸಿರುವುದು ವಿಶೇಷ. ಪಂಚಾಯತಿ ಉಪಾಧ್ಯಕ್ಷ ಆನಂದ ಕೆ ಮವ್ವಾರ್ ಆಟಗಾರರಾಗಿ ಕಣಕ್ಕಿಳಿದು ಜತೆಗಾರರನ್ನು ಪ್ರೋತ್ಸಾಹಿಸಿದರು. ಇದೊಂದು ಮಾದರಿ ಕಾರ್ಯವೂ ಹೌದು. ಅತ್ಯಂತ ಆಸಕ್ತಿ ಹಾಗೂ ಉತ್ಸಾಹದಿಂದ ಕ್ರೀಡಾಳುಗಳನ್ನು ಜೊತೆಸೇರಿಸಿ ತಾವೂ ಒಟ್ಟುಗೂಡಿ ಆಡಿ ವಾಲಿಬಾಲ್ ಲೀಗ್ ನಡೆಸಲಾಯಿತು.
ಆನಂದ ಕೆ ಮವ್ವಾರ್, ಎಸ್.ಮೊಹಮ್ಮದ್ ಕುಂಞÂ, ಬಿ.ಟಿ.ಅಬ್ದುಲ್ಲ ಕುಂಞÂ, ನ್ಯಾಯವಾದಿ. ಮೊಹಮ್ಮದ್ ಖಾಸಿಂ, ರವೀಂದ್ರ ರೈ ಗೋಸಾಡ ಹಾಗೂ ಶಶಿಧರ ಎಂಬವರ ನೇತೃತ್ವದ ತಂಡಗಳ ಮಧ್ಯೆ ನಡೆದ ವಾಲಿಬಾಲ್ ಪಂದ್ಯಾವಳಿಯು ಸೌಹಾರ್ಧತೆಯಿಂದ ನಡೆಯಿತು, ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ 20 ಆಟಗಾರರನ್ನು ಆಯ್ದು ಅವರಿಗೆ ಸೂಕ್ತ ತರಭೇತಿ ನೀಡುವ ಉದ್ದೇಶದಿಂದ ಈ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯತು ಮಟ್ಟದಲ್ಲಿ ತಂಡ ರಚಿಸುವುದಲ್ಲದೆ ಯೂತ್ ಪಂದ್ಯಾವಳಿಯಲ್ಲಿ ಸ್ಪರ್ಧಿಸಲು ಅವಕಾಶಕ್ಕಾಗಿ ಪ್ರಯತ್ನಿಸಲಾಗುವುದು ಎಂದು ಪಂಚಾಯತು ಅಧಿಕೃತರು ಈ ಸಂದರ್ಭದಲ್ಲಿ ಹೇಳಿದರು. ಗ್ರಾಮ ಪಂಚಾಯತು ಕಾರ್ಯದರ್ಶಿ ಅಚ್ಚುತ ಮಣಿಯಾಣಿ, ಥೋಮಸ್ ಸಹಕಾರ ನೀಡಿದರು.
ರಾಷ್ಟ್ರಮಟ್ಟದಲ್ಲಿ ಚೆಸ್ ಚಾಂಪ್ಯನ್ ಆಗಿ ಚಿನ್ನದ ಪದಕ ಗೆದ್ದ ಗಡಿನಾಡಿನ ಚೆಸ್ ಆಟಗಾರ ಗಗನ್ ಭಾರದ್ವಾಜ್ ಮತ್ತು ಜಿಲ್ಲಾ ತಂಡವನ್ನು ಪ್ರತಿನಿಧೀಕರಿಸುತ್ತಿರುವ ವಹಾಬ್ ಕುಂಬ್ಡಾಜೆ ಇವರನ್ನು ಈ ಸಂದರ್ಭ ಅಭಿನಂದಿಸಲಾಯಿತು.


