ಕಲೆ-ಸಾಹಿತ್ಯ ಚಟುವಟಿಕೆಗಳ ಆಯೋಜನೆ ಶಾಲೆಗಳನ್ನು ಕೇಂದ್ರೀಕರಿಸಿದಲ್ಲಿ ಪರಿಣಾಮಕಾರಿ-ಧರ್ಮದರ್ಶಿ ಪುನರೂರು ಪೆರ್ಲ ಕೃಷ್ಣ ಭಟ್ ಸಂಸ್ಮರಣೆಯಲ್ಲಿ ಅಭಿಮತ
0
ಡಿಸೆಂಬರ್ 16, 2018
ಪೆರ್ಲ: ಅಗಾಧ ಪಾಂಡಿತ್ಯ ಹಾಗೂ ಪ್ರಬುದ್ದ ವಾಕ್ಚತುರ್ಯಗಳಿಂದ ತಾಳಮದ್ದಳೆ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈದ ದಿ.ಪೆರ್ಲ ಕೃಷ್ಣ ಭಟ್ ಅವರ ಬದುಕು ಸಾಧನೆಗಳ ದಾಖಲೀಕರಣ ಗಂಭೀರವಾಗಿ ಆಗಬೇಕು. ಅವರ ನೆನಪು-ಸಂಸ್ಮರಣೆಗಳನ್ನು ಆಸಕ್ತ ಯುವಜನರನ್ನು ಕೇಂದ್ರೀಕರಿಸಿ ವಿದ್ಯಾಲಯಗಳಲ್ಲಿ ಆಯೋಜಿಸುವುದರಿಂದ ಹೊಸ ತಲೆಮಾರಿಗೆ ಪ್ರೇರಣೆಯಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ಮಾಜೀ ರಾಜ್ಯಾಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯ ವ್ಯಕ್ತಪಡಿಸಿದರು.
ಪೆರ್ಲ ಕೃಷ್ಣ ಭಟ್ ಸಾಂಸ್ಕøತಿಕ ಪ್ರತಿಷ್ಠಾನ ಪೆರ್ಲ ಇದರ ನೇತೃತ್ವದಲ್ಲಿ ಶನಿವಾರ ಅಪರಾಹ್ನ ಪೆರ್ಲ ಶ್ರೀಭಾರತೀ ಸದನ ಸಭಾಂಗಣದಲ್ಲಿ ಆಯೋಜಿಸಿದ್ದ ಪೆರ್ಲ ಸಂಸ್ಮರಣ ಸಮಾರಂಭ-2018 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನಸ್ನೇಹಿಯಾಗಿ ಸರಳ ಜೀವನ ಶೈಲಿಯ ಪೆರ್ಲ ಕೃಷ್ಣ ಭಟ್, ನಿಗರ್ವಿ ವ್ಯಕ್ತಿತ್ವದ ಮೂಲಕ ಮಾದರಿಯಾದವರು. ಗಡಿನಾಡಿನ ಕನ್ನಡ ಭಾಷೆ, ಸಂಸ್ಕøತಿ ಸಂವರ್ಧನೆಯಲ್ಲಿ ವಿಶೇಷ ಆಸಕ್ತರಾಗಿದ್ದ ಅವರ ಸ್ಮರಣೆಯ ಕರ್ತವ್ಯ ಸಮಾಜಕ್ಕಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಂಸ್ಮರಣಾ ಭಾಷಣಗೈದು ಮಾತನಾಡಿದ ಮಧುರೈ ಕಾಮರಾಜ ವಿವಿಯ ನಿವೃತ್ತ ಕನ್ನಡ ವಿಭಾಗ ಮುಖ್ಯಸ್ಥ ಡಾ.ಹರಿಕೃಷ್ಣ ಭರಣ್ಯ ಅವರು, ಸರಳ ಸಜ್ಜನ ವ್ಯಕ್ತಿ, ಉತ್ತಮ ಶಿಕ್ಷಕ ಹಾಗೂ ಯಕ್ಷಗಾನ, ಸಾಹಿತ್ಯಗಳ ಮೂಲಕ ಬಹುಮುಖ ವ್ಯಕ್ತಿತ್ವದ ಪೆರ್ಲ ಕೃಷ್ಣ ಭಟ್ ಅವರು ಅಪಾರ ಶಿಷ್ಯರು ಹಾಗೂ ಅನುಯಾಯಿಗಳನ್ನು ಸಂಪಾದಿಸಿರುವುದು ಅವರ ಭೀಮ ಸ್ವರೂಪದ ಪ್ರತೀಕವಾಗಿದೆ ಎಂದು ತಿಳಿಸಿದರು. ವಿದ್ಯಾಲಯದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಅವರು ವಿದ್ಯಾರ್ಥಿಗಳ ಕ್ರಿಯಾತ್ಮಕತೆ, ಸೃಜನಶೀಲತೆಗೆ ಬೆಂಬಲವಾಗಿ ಮಾರ್ಗದರ್ಶನ ನೀಡಿದವರಾಗಿದ್ದರು. ಈ ಕಾರಣದಿಂದ ಅನೇಕ ಶಿಷ್ಯಂದಿರನ್ನು ನಾಡಿನ ವಿದ್ವನ್ ಮಣಿಗಳಾಗಿ ಮುನ್ನಡೆಸುವಲ್ಲಿ ಅವರ ಅಪಾರ ಶ್ರಮ ವ್ಯಕ್ತಗೊಂಡಿದೆ. ಅವರ ಕಾಲಘಟ್ಟದ ತಾಳಮದ್ದಳೆ ಕ್ಷೇತ್ರದ ಮಹಾನ್ ಕಲಾ ತಪಸ್ವಿಗಳೊಂದಿಗೆ ಜೊತೆಯಾಗಿದ್ದ ಕೃಷ್ಣ ಭಟ್ ಅವರ ಅಧ್ಯಯನಶೀಲತೆ, ಕಲಾಫ್ರೌಢಿಮೆ, ಚಮತ್ಕಾರೀಯ ಮಾತುಗಾರಿಕೆ ಮೂಲಕ ಬೆರಗುಗೊಳಿಸುತ್ತಿತ್ತು ಎಂದು ನೆನಪಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಯಕ್ಷಗಾನ ಕಲಾವಿದ, ಅರ್ಥಧಾರಿ ಕುಂಬಳೆ ಸುಂದರ ರಾವ್ ಅವರಿಗೆಪ್ರಸಕ್ತ ಸಾಲಿನ ಪೆರ್ಲ ಪ್ರಶಸ್ತಿ ಪ್ರಧಾನಗೈದು ಗೌರವಿಸಲಾಯಿತು. ಈ ಸಂದರ್ಭ ಕುಂಬಳೆ ಸುಂದರ ರಾವ್ ಅವರು ಪೆರ್ಲ ಕೃಷ್ಣ ಭಟ್ ಅವರ ಒಡನಾಡಗಳ ನೆನಪುಗಳನ್ನು ಹಂಚಿಕೊಂಡರು.
ಪೆರ್ಲ ಕೃಷ್ಣ ಭಟ್ ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷ ಬನಾರಿ ನಾರಾಯಣ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ರಾಜಾರಾಮ ಪೆರ್ಲ ವಂದಿಸಿದರು. ಪೆರ್ಲ ಸತ್ಯನಾರಾಯಣ ಹೈಸ್ಕೂಲಿನ ಮುಖ್ಯೋಪಾಧ್ಯಾಯ ರಾಜೇಂದ್ರ ಮಾಸ್ತರ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಪ್ರತಿಷ್ಠಾನದ ಸದಸ್ಯರಾದ ಡಾ.ಶ್ರೀಪತಿ ಕಜಂಪಾಡಿ, ಎಸ್.ರಾಮ ಭಟ್ ಕೋಟೆ, ಕೆ.ರಾಮಕೃಷ್ಣ ಭಟ್ ಮೀನಡ್ಕ ಮೊದಲಾದವರು ಸಹಕರಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಂಸ್ಮರಣಾ ತಾಳಮದ್ದಳೆ ಪ್ರಸ್ತುತಿಗೊಂಡಿತು. ಉತ್ತರ ಗೋಗ್ರಹಣ ಪ್ರಸಂಗದ ತಾಳಮದ್ದಳೆಯ ಹಿಮ್ಮೇಳದಲ್ಲಿ ಸತ್ಯನಾರಾಯಣ ಪುಣಿಚಿತ್ತಾಯ ಪೆರ್ಲ(ಭಾಗವತಿಕೆ), ದೇಲಂತಮಜಲು ಸುಬ್ರಹ್ಮಣ್ಯ ಭಟ್(ಚೆಂಡೆ), ಶ್ರೀಧರ ಪಡ್ರೆ (ಮೃದಂಗ), ಅವಿನಾಶ ಶಾಸ್ತ್ರಿ ಕೊಲ್ಲೆಂಕಾನ(ಚಕ್ರತಾಳ)ದಲ್ಲಿ ಸಹಕರಿಸಿದರು. ಮುಮ್ಮೇಳದಲ್ಲಿ ಕುಂಬಳೆ ಸುಂದರ ರಾವ್(ಉತ್ತರಕುಮಾರ), ರಾಧಾಕೃಷ್ಣ ಕಲ್ಚಾರ್(ಬೃಹನ್ನಳೆ), ರಾಮಾ ಜೋಯಿಸ ಬೆಳ್ಳಾರೆ(ಗೋಪಾಲಕ) ಹಾಗೂ ಕೋಟೆ ರಾಮ ಭಟ್(ಉತ್ತರೆ)ಪಾತ್ರ ನಿರ್ವಹಣೆಯ ನಡೆಸಿದರು. ಕನ್ನಡದ ಖ್ಯಾತ ಚಿಂತಕ ಲಕ್ಷ್ಮೀಶ ತೋಲ್ಪಾಡಿ, ಮೂರ್ತಿ ದೇರಾಜೆ, ಟಿ.ಆರ್.ಕೆ.ಭಟ್, ಸಂಕಬೈಲು ಸತೀಶ ಅಡಪ ಮೊದಲಾದವರು ಸಮಾರಂಭಕ್ಕೆ ಸಾಕ್ಷಿಯಾದರು.




