ಧರ್ಮಸ್ಥಳದಲ್ಲಿ ಮದ್ಯವರ್ಜನ ಶಿಬಿರಾರ್ಥಿಗಳ ನವಜೀವನ ಕುಟುಂಬ ಸಂಗಮ ಶತದಿನೋತ್ಸವ ಆಚರಣೆ
0
ಡಿಸೆಂಬರ್ 25, 2018
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಮದ್ಯವರ್ಜನ ಶಿಬಿರಾರ್ಥಿಗಳ ನವಜೀವನ ಶತದಿನೋತ್ಸವ ಕುಟುಂಬ ಸಂಗಮ ಕಾರ್ಯಕ್ರಮ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಮಂಗಳವಾರದಂದು ನಡೆಯಿತು. ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಟುಂಬ ಜೀವನ ಸುಸ್ಥಿರವಾಗಿರಲು ಮನುಷ್ಯನ ಸನ್ನಡತೆ ಅತೀ ಮುಖ್ಯವಾಗಿದ್ದು, ಉತ್ತಮ ನಡವಳಿಕೆಗಳ ಮೂಲಕ ಕುಟುಂಬದ ಆರ್ಥಿಕ ಪ್ರಗತಿ ಸಾಧ್ಯವಿದೆ ಎಂದರು. ಶಿಬಿರಾರ್ಥಿಗಳ ಕೌಟುಂಬಿಕ ಜೀವನದಲ್ಲಿ ಹೊಸ ಮೈಲುಗಲ್ಲಾಗಿ, ಬಾಳಿಗೆ ಬೆಳಗಾಗಿರುವ ಹಲವು ಮದ್ಯವರ್ಜನ ಶಿಬಿರಗಳಿಂದ ಸಮಾಜದಲ್ಲಿ ಹೊಸ ಮನ್ವಂತರ ಸೃಷ್ಠಿ ಸಾಧ್ಯವಾಗಿದೆ ಎಂದರು. ದೇವರ ಮೇಲೆ ಅಚಲವಾದ ಭಕ್ತಿಯನ್ನು ನಿರಂತರವಾಗಿರಿಸಿ, ಧಾರ್ಮಿಕ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಎಲ್ಲರೂ ಪ್ರಗತಿ ಪಥದಲ್ಲಿ ಮುನ್ನಡೆಯಬಹುದಾಗಿದೆ ಎಂಬ ಕಿವಿಮಾತನ್ನು ಹೇಳಿದರು. ಉತ್ತಮ ಜೀವನ ಶೈಲಿಯ ಮೂಲಕ ಕೌಟುಂಬಿಕ ಸಾಮರಸ್ಯ ಸಹಿತ ಆರ್ಥಿಕ ಸುಸ್ಥಿರತೆ ತರಲು ಮದ್ಯವರ್ಜನ ಶಿಬಿರಗಳು ಸಹಕಾರಿಯಾಗಿವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಮತ್ತು ಕೇರಳ ರಾಜ್ಯಗಳ ಒಟ್ಟು ಮೂರು ಸಾವಿರಕ್ಕೂ ಹೆಚ್ಚಿನ ಶಿಬಿರಾರ್ಥಿಗಳು ಕುಟುಂಬ ಸಹಿತರಾಗಿ ನವಜೀವನದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಸರಗೋಡು ಜಿಲ್ಲೆಯ ವರ್ಕಾಡಿ ಮತ್ತು ತಲಪಾಡಿ ವಲಯದ ಮದ್ಯ ವರ್ಜನ ಶಿಬಿರದಿಂದ ಒಟ್ಟು 150 ಮಂದಿ ಶಿಬಿರಾರ್ಥಿಗಳು ಸಪತ್ನೀಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಧರ್ಮಸ್ಥಳ ಮಂಜುನಾಥನ ಅನುಗ್ರಹದೊಂದಿಗೆ ಖಾವಂದರ ಶುಭಾಶೀರ್ವಾದವನ್ನು ಪಡೆದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಲ್,ಮಂಜುನಾಥ್, ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಯಾಸ್, ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಅಶ್ವಥ್ ಪೂಜಾರಿ ಲಾಲ್‍ಭಾಗ್, ಮಂಡ್ಯ ಜಿಲ್ಲಾ ಜನಜಾಗೃತಿ ವೇದಿಕೆಯ ರಾಜೇಶ್, ಕಾರ್ಕಳ ತಾಲೂಕು ಜನಜಾಗೃತಿ ವೇದಿಕೆಯ ಕಮಲಾಕ್ಷ ನಾಯಕ್, ತಲಪಾಡಿ ವಲಯ ಮದ್ಯವರ್ಜನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಕಡಂಬಾರು, ಉಪಾಧ್ಯಕ್ಷ ಉಮೇಶ್ ಶೆಟ್ಟಿ ಕುಂಡೇರಿ, ಗಿರೀಶ್ ಶೆಟ್ಟಿ ಚಿಪ್ಪಾರು ಮೊದಲಾದವರು ವೇದಿಕೆಯಲ್ಲಿ ಇದ್ದರು. ಧ.ಗ್ರಾ.ಯೋಜನೆ ಪದಾಧಿಕಾರಿಗಳು, ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.



