ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಮಂದಿರದ ದಶಮಾನೋತ್ಸವ
0
ಡಿಸೆಂಬರ್ 26, 2018
ಬದಿಯಡ್ಕ: ನಾರಂಪಾಡಿ ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನ ಮಂದಿರದ ದಶಮಾನೋತ್ಸವ ಮತ್ತು ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಡಿ.28ರಿಂದ 30ರ ತನಕ ನಡೆಯಲಿದ್ದು, ಮೂರು ದಿನಗಳಲ್ಲಾಗಿ ಸುಮಾರು 15,000ಕ್ಕೂ ಮಿಕ್ಕ ಜನರು ಪಾಲ್ಗೊಂಡು ಅನ್ನಪ್ರಸಾದವನ್ನು ಸ್ವೀಕರಿಸಲಿದ್ದಾರೆ ಎಂದು ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಎಂ.ಸಂಜೀವ ಶೆಟ್ಟಿ ಮೊಟ್ಟಕುಂಜ ಮಂಗಳವಾರ ಶ್ರೀಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಜೃಂಭಣೆಯಿಂದ ಆಚರಿಸುವರೇ ಅಂತಿಮ ಹಂತದ ಸಿದ್ಧತೆಯಲ್ಲಿ ಕಾರ್ಯಕರ್ತರು ತಲ್ಲೀನರಾಗಿದ್ದಾರೆ. ಜಾತಿ ಮತ ಬೇಧವಿಲ್ಲದೆ ಎಲ್ಲರೂ ಐಕ್ಯತೆಯಿಂದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದು ಇಲ್ಲಿನ ಒಂದು ವಿಶೇಷತೆಯಾಗಿದೆ. ಸಮೀಪದಲ್ಲೇ ಇರುವ ಮಸೀದಿ, ಇಗರ್ಜಿಗಳಿಂದ ಪ್ರತೀವರ್ಷ ಉತ್ತಮ ರೀತಿಯ ಸಹಕಾರವನ್ನು ನೀಡಿತ್ತಿರುವುದಲ್ಲದೆ, ಕಾರ್ಯಕರ್ತರಾಗಿಯೂ ನಮ್ಮೊಂದಿಗೆ ಸಹಕರಿಸುತ್ತಿದ್ದಾರೆ ಎಂದರು.
ದಶಮಾನೋತ್ಸವ ಸಮಿತಿಯ ಪ್ರಧಾನ ಸಂಚಾಲಕ ಕೆ.ವಿ. ರಮೇಶ್ ಶರ್ಮ ಕಾರ್ಯಕ್ರಮದ ಕುರಿತು ವಿವರಿಸುತ್ತಾ ಹಿಂದಿನ ಕಾಲದಲ್ಲಿ ಇಲ್ಲಿಯವರಾದ ದಿ. ವಿಷ್ಣುಗುರುಸ್ವಾಮಿಯವರು ನೇತೃತ್ವವನ್ನು ವಹಿಸಿ ಕಾಸರಗೋಡು ಜಿಲ್ಲೆಯ ಅದೆಷ್ಟೋ ಮಂದಿಗೆ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಮಾಡಿಸಿದ್ದರು. ಅವರ ಆಶಯದಂತೆ ದಿ. ನಾರಾಯಣ ಮಣಿಯಾಣಿ ಪಾವೂರು ಅವರ ನೇತೃತ್ವದಲ್ಲಿ ಆರಂಭವಾದ ಮಂದಿರವು ಇಂದು ದಶಮಾನೋತ್ಸವವನ್ನು ಕಾಣುತ್ತಿದೆ. ಪ್ರತೀವರ್ಷ ವಿಜೃಂಭಣೆಯಿಂದ ಇಲ್ಲಿ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಯ್ಯಪ್ಪನ್ ತಿರುವಿಳಕ್ ಮಹೋತ್ಸವವೂ ನಡೆಯಲಿದೆ. ಶ್ರೀಮಂದಿರದ ತಂತ್ರಿವರ್ಯರಾದ ಬ್ರಹ್ಮಶ್ರೀ ಡಾ. ಮಾಧವ ಉಪಾಧ್ಯಾಯರ ದಿವ್ಯ ಮಾರ್ಗದರ್ಶನದಿಂದ ನಿತ್ಯ ನೈಮಿತ್ತಿಕಗಳು, ಭಜನಾ ಸೇವೆಗಳು ಶ್ರೀಮಂದಿರದ ಸಾನ್ನಿಧ್ಯ ಸ್ವರೂಪನಾದ ಶ್ರೀ ಧರ್ಮಶಾಸ್ತಾರನ ಚೈತನ್ಯವನ್ನು ವರ್ಧಿಸಿ ಭಗವದ್ಭಕ್ತರ ಆಶೋತ್ತರಗಳ ಈಡೇರಿಕೆಗೆ ಕಾರಣೀಭೂತವಾಗಿದೆ. ಇಲ್ಲಿ ಹರಕೆಯನ್ನು ಹೊತ್ತು ಭಜನ ಸೇವೆಯನ್ನು ಮಾಡಿಸಿದ ಅದೆಷ್ಟೋ ಮಂದಿಗಳ ಕಷ್ಟ ನಿವಾರಣೆಯಾಗಿದೆ. ಬುದ್ಧಿಭ್ರಮಣೆ, ವಿದ್ಯಾಭ್ಯಾಸ, ನೀರಿನ ಕೊರತೆಗೆ ಇಲ್ಲಿ ನಂಬಿದ ಭಕ್ತರ ಬೇಡಿಕೆ ಸಾಕಾರಗೊಂಡಿದೆ ಎಂದು ತಿಳಿಸಿದರು.
ಡಿ. 28ರಂದು ಪೂರ್ವಾಹ್ನ 9 ಗಂಟೆಗೆ ಅಗಲ್ಪಾಡಿ ಜಯನಗರ ಶ್ರೀ ಗೋಪಾಲಕೃಷ್ಣ ಭಜನ ಮಂದಿರದಿಂದ ಹಸಿರುವಾಣಿ ಹೊರೆಕಾಣಿಕೆ ಶೋಭಾಯಾತ್ರೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. ಪೂ.10.30ಕ್ಕೆ ಸಾಂಸ್ಕøತಿ ಕಾರ್ಯಕ್ರಮಗಳ ಉದ್ಘಾಟನೆ, ಭಜನಾಸಂಕೀರ್ತನೆ, ಮಹಾಪೂಜೆ, ಅನ್ನದಾನ, ಭಜನೆ, ತಂತ್ರಿವರ್ಯರಿಗೆ ವೇದಘೋಷಗಳೊಂದಿಗೆ ಪೂರ್ಣಕುಂಭ ಸ್ವಾಗತ, ಗಣಪತಿ ಪೂಜೆ, ವಾಸ್ತು ಹೋಮ, ಪೂಜಾದಿಗಳು ನಡೆಯಲಿವೆ. ಸಂಜೆ 6ರಿಂದ ಕೊಳಲು ವಾದನ, ನೃತ್ಯ ವೈಭವ, ರಾತ್ರಿ ಮಹಾಪೂಜೆ, ಯಕ್ಷಗಾನ ಬಯಲಾಟ ನಡೆಯಲಿದೆ.
ಡಿ.29ರಂದು ಪ್ರಾತಃಕಾಲ 12 ಕಾಯಿಗಳ ಮಹಾಗಣಪತಿ ಹೋಮ, 7 ಗಂಟೆಯಿಂದ ಲಕ್ಷಾರ್ಚನೆ, ತಂತ್ರಿವರ್ಯರ ನೇತೃತ್ವದಲ್ಲಿ 8 ಕ್ಕೆ ಶ್ರೀದೇವರ ಛಾಯಾಚಿತ್ರ ಪುನಃಪ್ರತಿಷ್ಠೆ, 10 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ, ಆನೆಮಜಲು ವಿಷ್ಣು ಭಟ್ ಉದ್ಘಾಟಿಸಲಿದ್ದಾರೆ. ಸಂಪುಟ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ತಂತ್ರಿವರ್ಯ ಬ್ರಹ್ಮಶ್ರೀ ವೇದಮೂರ್ತಿ ಡಾ. ಬಳ್ಳಪದವು ಮಾಧವ ಉಪಾಧ್ಯಾಯ ಹಾಗೂ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಭಟ್ ಉಪ್ಪಂಗಳ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. 5 ಜನ ಹಿರಿಯ ಗುರುಸ್ವಾಮಿಗಳಿಗೆ ಗುರುವಂದನೆ, ಕೇರಳ ರಾಜ್ಯ ಅಯ್ಯಪ್ಪ ಸೇವಾಸಮಾಜಂನ ಸ್ವಾಮಿ ಅಯ್ಯಪ್ಪದಾಸ್ ಅವರಿಂದ ಧಾರ್ಮಿಕ ಪ್ರವಚನ ನಡೆಯಲಿದೆ. ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿರುವರು. ಮಧ್ಯಾಹ್ನ ಲಕ್ಷಾರ್ಚನೆಯ ಮಹಾಮಂಗಳಾರತಿ, ಶ್ರೀ ದೇವರಿಗೆ ಪಂಚಗವ್ಯ, ಕಲಶಾಭಿಷೇಕ, ದ್ವಾದಶ ಮೂರ್ತಿ ಆರಾಧನೆ, ಮಹಾಪೂಜೆ, ಅನ್ನದಾನ ನಡೆಯಲಿದೆ. ಸಂಜೆ ಸತ್ಯನಾರಾಯಣ ಪೂಜೆ, ನಾಟ್ಯಾಚಾರ್ಯ ಬಾಲಕೃಷ್ಣ ಮಾಸ್ತರ್ ಮಂಜೇಶ್ವರ ಶಿಷ್ಯವೃಂದದವರಿಂದ ನೃತ್ಯಪುಷ್ಪಂ, ರಾತ್ರಿ 9.30ಕ್ಕೆ ಚಾಲಕ್ಕುಡಿ ಸೂಪರ್ ಕಿಂಗ್ಸ್ ಅರ್ಪಿಸುವ ಭಕ್ತಿಗಾನಾರ್ಚನೆ - 2018, ಜೂನಿಯರ್ ಯೇಸುದಾಸ್ ಖ್ಯಾತಿಯ ರಾಹುಲ್ ಸೂರ್ಯ ತಿರುವನಂತಪುರ ಪಾಲ್ಗೊಳ್ಳಲಿದ್ದಾರೆ.
ಡಿ.30ರಂದು ಪ್ರಾತಃಕಾಲ ಗಣಪತಿ ಹೋಮ, ಶ್ರೀ ಶನೈಶ್ಚರ ಪೂಜೆ, ಸೂರ್ಯನಾರಾಯಣ ಭಟ್ ಮಿತ್ತೂರು ಪಾಲಕ್ಕಾಡ್ ಮತ್ತು ಬಳಗದವರಿಂದ ಸಾಂಪ್ರದಾಯಿಕ ವಿಶೇಷ ಭಜನಾ ಕಾರ್ಯಕ್ರಮ, ಅಪರಾಹ್ನ ಯಕ್ಷಗಾನ ತಾಳಮದ್ದಳೆ, ಸಂಜೆ 6.30ಕ್ಕೆ ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಿಂದ ವೈಭವದ ಪಾಲೆಕೊಂಬು ಮೆರವಣಿಗೆ, ರಾತ್ರಿ 7.30ಕ್ಕೆ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ಶಿಷ್ಯವೃಂದದವರಿಂದ ನೃತ್ಯಾಂಜಲಿ-2018, ರಾತ್ರಿ ಮಹಾಪೂಜೆ, ಅನ್ನದಾನ, 11.30ಕ್ಕೆ ಲಕ್ಕೀ ಕೂಪನ್ ಡ್ರಾ, ಅಯ್ಯಪ್ಪನ್ ಪಾಟು, ಪೊಲಿಪಾಟು, ಪ್ರಾತಃಕಾಲ 2.30 ತಾಲಪ್ಪೊಲಿ, ಅಗ್ನಿಸ್ಪರ್ಶ, ತಿರಿಉಯಿಚ್ಚಿಲ್, ಅಯ್ಯಪ್ಪ ವಾವರ್ ಯುದ್ಧ, ತಿರುವಿಳಕ್ಕ್ ಉತ್ಸವ ಜರಗಲಿದೆ.
ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಸುದ್ದಿಗೋಷ್ಠಿಯಲ್ಲಿ ವಿನಂತಿಸಲಾಗಿದೆ. ರಾಧಾಕೃಷ್ಣನ್ ನಾಯರ್, ಪವಿತ್ರನ್ ಕುರುಮುಜ್ಜಿಕಟ್ಟೆ, ನಾರಾಯಣ ಗುರುಸ್ವಾಮಿ, ಉದಯಕುಮಾರ್ ಕುರುಮುಜ್ಜಿ, ನಾರಾಯಣ ಮುಖಾರಿ ಕೆ.ಎಂ., ರವೀಶ ಕುರುಮುಜ್ಜಿ, ನಾರಾಯಣ ಎಂ.ಕಜೆಮಲೆ, ರಾಜೇಶ್ ಶೆಟ್ಟಿ ಬಲೆಕ್ಕಳ, ರವೀಂದ್ರ ರೈ ಗೋಸಾಡ, ದಿನೇಶ್ ಕುರುಮುಜ್ಜಿ, ಮಾಧವ ಶರ್ಮ, ಸೂರ್ಯ ಪಾವೂರು, ಸುಧಾಮ ಗೋಸಾಡ, ದಿನೇಶ್ ಕುರುಮುಜ್ಜಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.


