ಶತಮಾನೋತ್ಸವ ವೇದಿಕೆಯಲ್ಲಿ ನಿತೃತ್ತರಿಗೆ ಗೌರವ ಸಲ್ಲಿಕೆ ಗಡಿನಾಡ ಮಣ್ಣಲ್ಲಿ ಕನ್ನಡ ಶಾಲೆಯ ಸಾಧನೆ ಅಭಿನಂದನಾರ್ಹ-ಡಾ.ಬಿ.ಎ.ವಿವೇಕ ರೈ
0
ಡಿಸೆಂಬರ್ 26, 2018
ಬದಿಯಡ್ಕ: ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸೇವೆಯಿಂದ ನಿವೃತ್ತರಾಗಲಿರುವ ಮುಖ್ಯ ಶಿಕ್ಷಕಿ ಸರೋಜ ಪಿ., ಶಿಕ್ಷಕಿ ಸರೋಜ ಎನ್.ಕೆ. ಹಾಗೂ ಕುಂಬಳೆ ಉಪಜಿಲ್ಲಾ ಸಹಾಯಕ ವಿದ್ಯಾಧಿಕಾರಿ ಕೈಲಾಸ ಮೂರ್ತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಹಂಪಿ ಮತ್ತು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಬಿ.ಎ.ವಿವೇಕ ರೈ ಸನ್ಮಾನಿಸಿ ಮಾತನಾಡಿ, ಹಳ್ಳಿಗಳು ದೇಶದ ಸಂಪತ್ತಿನ ಮೂಲ ಹಾಗೂ ಶಕ್ತಿ. ಸರಕಾರದ ಅನುಕೂಲತೆ, ಇನ್ನೊಬ್ಬರ ಸಹಾಯ ನಿರೀಕ್ಷಿಸದೆ ಗಾಂಧೀಜಿಯವರ ತತ್ವ, ಆದರ್ಶ, ಸರಳತೆ, ಸ್ವಾಭಿಮಾನವನ್ನು ನಾವು ಬೆಳೆಸಿದರೆ ಅವರ ಸ್ವರಾಜ್ಯ ಕಲ್ಪನೆ ರಾಮ ರಾಜ್ಯದ ಕನಸು ನನಸಾಗುವುದು. ಜ್ಞಾನದ ಸ್ನಾನ ಮಾಡಿಸುವ ವಿದ್ಯಾ ಸಂಸ್ಥೆ ಪುಣ್ಯಕ್ಷೇತ್ರ. ನೂರು ವರ್ಷಗಳ ಹಿಂದೆ ದುರ್ಗಮ ಪ್ರದೇಶದಲ್ಲಿ ಶಾಲೆ ಸ್ಥಾಪನೆಯಿಂದ ತೊಡಗಿ ಶಿಕ್ಷಣದ ಜೀವಜಲವನ್ನು ಹರಿಸಿ ಅನೇಕ ಧುರೀಣರನ್ನು ಎತ್ತಿ ಹಿಡಿದ ಸ್ಥಳ ಏತಡ್ಕವಾಗಿದೆ. ಭಾಷೆ, ಸಂಸ್ಕೃತಿ, ಜೀವನ ರೂಪಿಸುವ ವಿದ್ಯಾ ಸಂಸ್ಥೆಗೆ ರೂಪು ಕೊಟ್ಟ ಸ್ಥಾಪಕರು, ವ್ಯವಸ್ಥಿತವಾಗಿ ಶತವರ್ಷಗಳ ಕಾಲ ಮುಂದೆ ಕೊಂಡೊಯ್ದ ವ್ಯವಸ್ಥಾಪಕರ, ವ್ಯಕ್ತಿತ್ವ ರೂಪಿಸಿದ ಅಧ್ಯಾಪಕರ, ಬೆನ್ನೆಲುಬಾಗಿ ನಿಂತ ಪೆÇೀಷಕರು ಹಾಗೂ ಊರವರ ಶ್ರಮ ಸ್ಮರಣೀಯ. ಕರ್ನಾಟಕದಲ್ಲೇ ಕನ್ನಡ ಮಾಧ್ಯಮ ಶಾಲೆಗಳು ಆತಂಕ ಸ್ಥಿತಿಯಲ್ಲಿರುವಾಗ ಕೇರಳದ ಮಣ್ಣಲ್ಲಿ ಕನ್ನಡ ಶಾಲೆ ಇಂದಿಗೂ ಉಳಿದು ಬೆಳೆಯುತ್ತಿರುವುದು ಅಭಿನಂದನಾರ್ಹ ಎಂದು ಅವರು ತಿಳಿಸಿದರು.
ಸನ್ಮಾನವನ್ನು ಸ್ವೀಕರಿಸಿ ಶಾಲಾ ಮುಖ್ಯ ಶಿಕ್ಷಕಿ, ಶತಮಾನೋತ್ಸವ ಸಮಿತಿ ಸಂಚಾಲಕಿ ಸರೋಜ ಪಿ. ಮಾತನಾಡಿ, ಕಲಿತ ಶಾಲೆಯಲ್ಲೇ ಅಧ್ಯಾಪಕಿ ಹಾಗೂ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿರುವುದು ಬಯಸದೇ ಬಂದ ಭಾಗ್ಯವಾಗಿದೆ. ಪೆÇೀಷಕರು ಹಾಗೂ ರಕ್ಷಕ ಸಂಘ, ಅಧ್ಯಾಪಕರು, ವ್ಯವಸ್ಥಾಪಕರು, ಮತ್ತು ಸಮಾಜವು ಒಂದು ವಿದ್ಯಾ ಸಂಸ್ಥೆಯ ಆಧಾರ ಸ್ಥಂಭಗಳು. ಮಕ್ಕಳು ವಿದ್ಯಾ ಸಂಸ್ಥೆಯ ಆಸ್ತಿ. ಅವರು ಸುಸಂಸ್ಕೃತರಾಗಲು ಪ್ರೀತಿ ಹಾಗೂ ಭೀತಿ ಮೂಡಿಸುವ ಮೂಲಕ ತಿದ್ದಿತೀಡಬೇಕು. ಇಲ್ಲಿನ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅನೇಕರು ನಾನಾ ಕ್ಷೇತ್ರಗಳಲ್ಲಿ ಮಿಂಚಿ ಬೆಳಗಿದ್ದಾರೆ. ಭೌತಿಕ ಪರಿಸರ ಅಭಿವೃದ್ಧಿಗೆ ಕಾರಣರಾದ ವ್ಯವಸ್ಥಾಪಕರು, ಸಹ ಶಿಕ್ಷಕರ ಸಹಕಾರ, ವಿದ್ಯಾರ್ಥಿಗಳ ಪ್ರೀತಿಗೆ ಚಿರ ಋಣಿ ಎಂದರು.
ಕಾಸರಗೋಡು ಡಿವೈಎಸ್‍ಪಿ ಎಂ.ವಿ.ಸುಕುಮಾರನ್, ಜಿಲ್ಲಾಪಂಚಾಯತಿ ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಸಾಹಿತಿ ನಾ.ದಾ ಶೆಟ್ಟಿ, ಕುಂಬ್ಡಾಜೆ ಗ್ರಾ.ಪಂ. ಸದಸ್ಯರುಗಳಾದ ಶೈಲಜಾ ನಡುಮನೆ, ಎಲಿಜಬೆತ್ ಕ್ರಾಸ್ತಾ, ಶಾಲಾ ವ್ಯವಸ್ಥಾಪಕ ವೈ. ಶ್ರೀಧರ್, ವೈ.ಕೆ.ಗಣಪತಿ ಭಟ್, ಮಾತೃ ಮಂಡಳಿ ಅಧ್ಯಕ್ಷೆ ಸೌಮ್ಯ ನೆಲ್ಲಿಮೂಲೆ, ಅಗಲ್ಪಾಡಿ ಶಾಲೆಯ ಪ್ರಾಂಶುಪಾಲ ಸತೀಶ ವೈ., ಹಳೆವಿದ್ಯಾರ್ಥಿನಿ ಶ್ರದ್ಧಾ ಕೆ. ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡರು. ಕಾಸರಗೋಡು ಸರಕಾರಿ ಕಾಲೇಜು ಉಪನ್ಯಾಸಕ ಶ್ರೀಧರ ಏತಡ್ಕ ಕಾರ್ಯಕ್ರಮ ನಿರೂಪಿಸಿದರು. ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಡಾ.ವೈ. ಸುಬ್ರಾಯ ಭಟ್ ಸ್ವಾಗತಿಸಿ, ಕೋಶಾಧಿಕಾರಿ ಸುಬ್ರಹ್ಮಣ್ಯ ವೈ.ವಿ. ವಂದಿಸಿದರು.

