ಸೀನಿಯರ್ ವಿಭಾಗದ ಚೆಸ್- ಚಿನ್ನದ ಪದಕ
0
ಡಿಸೆಂಬರ್ 15, 2018
ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂಣೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ, ಕುಂಬ್ಡಾಜೆ ಕಾನಕಜೆಯ ಗಗನ್ ಭಾರದ್ವಾಜ್ ಕೇರಳ ರಾಜ್ಯದ ಸೀನಿಯರ್ ವಿಭಾಗದ ಚೆಸ್ ತಂಡದಲ್ಲಿ ಸ್ಪರ್ಧಿಸಿ ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾನೆ. ಕೇರಳ ತಂಡವನ್ನು ಪ್ರತಿನಿಧಿಸಿ ಚಾಂಪ್ಯನ್‍ಶಿಪ್ ಪಡೆಯುವಲ್ಲಿ ಈತ ಪ್ರಧಾನಪಾತ್ರ ವಹಿಸಿದ್ದು, ಜಿಲ್ಲೆಗೆ ಹೆಮ್ಮೆಯೆನಿಸಿದ ಕನ್ನಡಿಗನಾಗಿದ್ದಾನೆ.
ಸ್ಪೋಟ್ಸ್ ಮತ್ತು ಗೇಮ್ಸ್ ಫೆಡರೇಶನ್ ಆಫ್ ಇಂಡಿಯದ ಆಶ್ರಯದಲ್ಲಿ ಆಂದ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ನಾರಾಯಣಪುರಂನಲ್ಲಿ ಡಿ.9ರಿಂದ ಡಿ.12ರ ತನಕ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಎದುರಾಳಿಗಳಿಗೆ ಪ್ರಬಲ ಪೈಪೋಟಿಯನ್ನು ನೀಡಿ ಕೇರಳ ರಾಜ್ಯ ಚಾಂಪ್ಯನ್‍ಶಿಪ್ ಪಡೆದುಕೊಂಡಿದೆ. ದೇಶದ ಎಲ್ಲಾ ರಾಜ್ಯಗಳಿಂದ ಆಯ್ಕೆಯಾದ 5 ಮಂದಿಯಂತೆ ತಂಡಗಳು ಸ್ಪರ್ಧಾಕಣದಲ್ಲಿದ್ದವು.
ಸ್ಪರ್ಧೆಗಳಲ್ಲಿ ಚಾಂಪ್ಯನ್‍ಶಿಪ್ ಪಡೆದು ಆಗಮಿಸಿದ ಗಗನ್ ಭಾರದ್ವಾಜ್‍ನನ್ನು ಶುಕ್ರವಾರ ಬೆಳಗ್ಗೆ ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಸ್ವಾಗತಿಸಲಾಯಿತು. ತಂದೆ ಪನೆಯಾಲ ಶ್ರೀ ಶಾಸ್ತಾರ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಗೋಪಾಲಕೃಷ್ಣ ಭಟ್ ಕಾನಕ್ಕಜೆ, ತಾಯಿ ನಯನ, ಶಾಲಾ ಮಾತೃಸಮಿತಿ ಅಧ್ಯಕ್ಷೆ ಜಯಂತಿ ಗೋಸಾಡ ಆತ್ಮೀಯವಾಗಿ ಬರಮಾಡಿಕೊಂಡರು. ಕಾಸರಗೋಡು ತಹಶೀಲ್ದಾರ್ ಕೆ.ನಾರಾಯಣನ್, ಕಾಸರಗೋಡು ಗ್ರಾಮಾಧಿಕಾರಿ ನಾರಾಯಣ ಗೋಸಾಡ ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಜಿಲ್ಲೆಯ ಪ್ರತಿಭಾನ್ವಿತ ಚೆಸ್ ಪಟು ಗಗನ್ ಭಾರದ್ವಾಜ್ :
ಶಾಲಾ ಮಟ್ಟ, ಕುಂಬಳೆ ಉಪಜಿಲ್ಲಾ ಮಟ್ಟ, ಕಾಸರಗೋಡು ಜಿಲ್ಲಾ ಮಟ್ಟದಲ್ಲಿ 7 ಉಪಜಿಲ್ಲಾ ಸ್ಪರ್ಧಿಗಳೊಂದಿಗೆ ಸ್ಪರ್ದಿಸಿ ಪ್ರಥಮ ಸ್ಥಾನವನ್ನು ಪಡೆದು ಈತ ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದನು. ವಲಯಮಟ್ಟದಲ್ಲಿಯೂ ಪ್ರಥಮ ಸ್ಥಾನದಲ್ಲಿ ತೇರ್ಗಡೆಯಾಗಿ, ಕೇರಳ ರಾಜ್ಯಮಟ್ಟಕ್ಕೆ ಆಯ್ಕೆ, ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಆಯ್ಕೆಯಾದ 5 ಮಕ್ಕಳ ತಂಡದಲ್ಲಿ ಈತನೂ ಓರ್ವನಾಗಿದ್ದನು.
ಕಳೆದ ಬಾರಿ ಕೇರಳೋತ್ಸವದಲ್ಲಿ ಜಿಲ್ಲೆಯಿಂದ ಆಯ್ಕೆಯಾಗಿ ರಾಜ್ಯಮಟ್ಟದಲ್ಲಿ ಪ್ರತಿನಿಧಿಸಿದ್ದನು. ವಿವಿಧೆಡೆಗಳಲ್ಲಿ ಚೆಸ್ ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ ಈತ ಪನೆಯಾಲ ಶ್ರೀ ಶಾಸ್ತಾರ ಕಿರಿಯ ಪ್ರಾಥಮಿಕ ಶಾಲೆ, ಏತಡ್ಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿಯಾಗಿದ್ದಾನೆ. ಈತ ಪ್ರಸ್ತುತ ಅಗಲ್ಪಾಡಿ ಶಾಲೆಯ ಪ್ಲಸ್ ಟು ವಿಭಾಗದ ವಿದ್ಯಾರ್ಥಿಯಾಗಿದ್ದಾನೆ. ಸಹೋದರಿ ಗಾನಸಮೃದ್ಧಿಯೂ ಪ್ರತಿಭಾನ್ವಿತ ಚೆಸ್ ಪಟುವಾಗಿದ್ದು ವಿವಿಧೆಡೆ ಸ್ಪರ್ಧೆಗಳಲ್ಲಿ ಅಣ್ಣನೊಂದಿಗೆ ಪ್ರಶಸ್ತಿಯನ್ನೂ ಪಡೆದಿರುತ್ತಾಳೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಬೇಕೆನ್ನುವ ಇವರು ಶ್ರೇಯಾಂಕಿತ ಆಟಗಾರರೂ ಆಗಿದ್ದಾರೆ.




