ದೇವರಗುಡ್ಡೆ ಶ್ರೀ ಶೈಲ ಮಹಾದೇವ ದೇವಸ್ಥಾನದಲ್ಲಿ ಧನುಪೂಜೆ
0
ಡಿಸೆಂಬರ್ 21, 2018
ಕಾಸರಗೋಡು: ಕೂಡ್ಲು ಗಂಗೆ ದೇವರಗುಡ್ಡೆ ಶ್ರೀ ಶೈಲ ಮಹಾದೇವ ದೇವಸ್ಥಾನದಲ್ಲಿ ಜನವರಿ 14 ರ ವರೆಗೆ ಪ್ರತಿದಿನ ಬೆಳಿಗ್ಗೆ ಅರುಣೋದಯದ ಶುಭ ಮುಹೂರ್ತದಲ್ಲಿ 5.45 ಕ್ಕೆ ಶ್ರೀ ಮಹಾದೇವರಿಗೆ ಧನುಪೂಜೆ ನಡೆಯುತ್ತಿದೆ. ಧನು ಪೂಜಾ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮದಂಗವಾಗಿ ಮೀಪುಗುರಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಊರ ಮತ್ತು ಪರವೂರ ಭಗವದ್ಭಕ್ತರಿಂದ ಹಾಗೂ ವಿವಿಧ ಭಜನಾ ಸಂಘಗಳ ಸಹಕಾರದೊಂದಿಗೆ ಚೆಂಡೆ, ವಾದ್ಯ, ಜಾಗಟೆ, ಶಂಖನಾದಗಳೊಂದಿಗೆ ದೇವರಗುಡ್ಡೆ ಶ್ರೀ ಶೈಲ ಮಹಾದೇವರ ಸನ್ನಿಧಿಗೆ ಬೃಹತ್ ಶೋಭಾಯಾತ್ರೆ ನಡೆಯಿತು.
ಕಾರ್ಯಕ್ರಮದಲ್ಲಿ ಡಾ.ಅನಂತ ಕಾಮತ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದಲ್ಲಿ ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಕುಂಬಳೆ ಅನಂತಪುರ ಅನಂತಪದ್ಮನಾಭ ಕ್ಷೇತ್ರದ ಆಡಳಿತ ಮಂಡಳಿ ಸದಸ್ಯ ನ್ಯಾಯವಾದಿ ಉದಯ ಗಟ್ಟಿ, ಪುಳ್ಕೂರು ಶ್ರೀ ಮಹಾದೇವ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಮೋಹನ ಕುಮಾರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು. ನ್ಯಾಯವಾದಿ ಸತೀಶ್ ಕೋಟೆಕಣಿ ಶುಭಹಾರೈಸಿದರು. ಭಜನಾ ಸಮಿತಿ ಕಾರ್ಯದರ್ಶಿ ನಾರಾಯಣ ನಾಯ್ಕ್ ವಂದಿಸಿದರು.
ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರಿಂದ 108 ತೆಂಗಿನ ಕಾಯಿ ಗಣಪತಿ ಹವನದೊಂದಿಗೆ ಧನುಪೂಜೆ ಆರಂಭಗೊಂಡಿತು. ಗುಡ್ಡೆ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಸಣ್ಣ ಕೂಡ್ಲು ಶಿವನಗರ ಅವರಿಂದ ಭಜನಾ ಸಂಕೀರ್ತನೆ ನಡೆಯಿತು.



