ಇನ್ನು ಇಂತಹ ಎಣ್ಣೆ ಸಿಗದು!-ತೆಂಗಿನೆಣ್ಣೆಯಲ್ಲಿ ವಿಷಾಂಶ ಬೆರಕೆ ಕೇರಳದಲ್ಲಿ 74 ಬ್ರ್ಯಾಂಡ್ ನಿಷೇಧ
0
ಡಿಸೆಂಬರ್ 21, 2018
ತಿರುವನಂತಪುರ: ತೆಂಗಿನೆಣ್ಣೆಯಲ್ಲಿ ವಿಷಾಂಶ ಬೆರೆಸಿರುವುದು ತಪಾಸಣೆ ವೇಳೆ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳ ರಾಜ್ಯದಲ್ಲಿ 74 ಬ್ರ್ಯಾಂಡ್ ತೆಂಗಿನೆಣ್ಣೆಯನ್ನು ಆಹಾರ ಭದ್ರತಾ ಇಲಾಖೆಯು ನಿಷೇಧಿಸಿ ಆದೇಶ ಹೊರಡಿಸಿದೆ.
ಆಹಾರ ಭದ್ರತಾ ಗುಣಮಟ್ಟ ನಿಯಮ 2006ರಲ್ಲಿ ಅನುಸರಿಸಿರುವ ನಿಬಂಧನೆಗಳನ್ನು ಉಲ್ಲಂಘಿಸಿ ವಿಷಾಂಶ ಬೆರೆಸಿ ತೆಂಗಿನೆಣ್ಣೆ ಉತ್ಪಾದಿಸಿ ವಿತರಿಸುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಭದ್ರತಾ ಆಯುಕ್ತ ಆನಂದ್ ಸಿಂಗ್ 74 ಬ್ರ್ಯಾಂಡ್‍ಗಳ ತೆಂಗಿನೆಣ್ಣೆಯನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಕಳೆದ ಮೇ 31 ರಂದು 45 ಬ್ರ್ಯಾಂಡ್‍ಗಳ ತೆಂಗಿನೆಣ್ಣೆಯನ್ನು ಮತ್ತು ಜೂನ್ 30ರಂದು 51 ಬ್ರ್ಯಾಂಡ್‍ಗಳ ತೆಂಗಿನೆಣ್ಣೆಯನ್ನು ನಿಷೇಧಿಸಲಾಗಿತ್ತು. ಇದೀಗ ಮತ್ತೆ 74 ಬ್ರ್ಯಾಂಡ್‍ಗಳ ತೆಂಗಿನೆಣ್ಣೆ ನಿಷೇಧಿಸುವುದರೊಂದಿಗೆ ಕೇರಳ ರಾಜ್ಯದಲ್ಲಿ ಒಟ್ಟು 170 ಬ್ರ್ಯಾಂಡ್‍ಗಳ ತೆಂಗಿನೆಣ್ಣೆಗಳನ್ನು ನಿಷೇಧಿಸಿದಂತಾಗಿದೆ.
ಕ್ರಿಸ್‍ಮಸ್, ಹೊಸ ವರ್ಷ ಆಚರಣೆ ಹಿನ್ನೆಲೆಯಲ್ಲಿ ಕಲಬೆರಕೆ ತೆಂಗಿನೆಣ್ಣೆ ಮಾರುಕಟ್ಟೆಯಲ್ಲಿ ಬೇಕಾಬಿಟ್ಟಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಸೂಚನೆ ದೊರೆತ ಹಿನ್ನೆಲೆಯಲ್ಲಿ ಆಹಾರ ಭದ್ರತಾ ಇಲಾಖೆಯು ಹಲವೆಡೆಗಳಲ್ಲಿ ತಪಾಸಣೆ ನಡೆಸುತ್ತಿದೆ. ಇದಕ್ಕಾಗಿ ಆಹಾರ ಭದ್ರತಾ ಇಲಾಖೆಯು ಕೇರಳದಾದ್ಯಂತ 38 ಸ್ಪೆಷಲ್ ಸ್ಕ್ವಾಡ್‍ಗಳನ್ನು ನೇಮಿಸಿದೆ.
ಈ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದ 38 ಡೆಸಿಗ್ನೇಟೆಡ್ ಅಧಿಕಾರಿಗಳು ಮತ್ತು 76 ಮಂದಿ ಆಹಾರ ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದೇ ವೇಳೆ ಕಟ್ಟುನಿಟ್ಟಿನ ತಪಾಸಣೆ ಮುಂದುವರಿಸಲು ಆಹಾರ ಭದ್ರತಾ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸಚಿವೆ ಕೆ.ಕೆ.ಶೈಲಜಾ ಟೀಚರ್ ಆದೇಶ ನೀಡಿದ್ದಾರೆ.


