ಇನ್ನು ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಸರ್ಟಿಫಿಕೇಟ್ ಡಿಜಿಟಲ್
0
ಡಿಸೆಂಬರ್ 21, 2018
* ರಾಜ್ಯದಾದ್ಯಂತ ಅನುಷ್ಠಾನ * ಶಿಕ್ಷಣ ಇಲಾಖೆ ನಿರ್ಧಾರ * ಮಕ್ಕಳಿಗೆ ಹೆಚ್ಚು ಅನುಕೂಲ
ತಿರುವನಂತಪುರ: ರಾಜ್ಯದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವವರಿಗೆ ಇನ್ನು ಮುಂದೆ ಡಿಜಿಟಲ್ ಸರ್ಟಿಫಿಕೇಟ್ ಲಭಿಸಲಿದೆ. ಇಲ್ಲಿಯವರೆಗೆ ಎಸ್‍ಎಸ್‍ಎಲ್‍ಸಿ ಪ್ರಮಾಣಪತ್ರವನ್ನು ಮುದ್ರಿಸಿ (ಪ್ರಿಂಟ್ ಮಾಡಿ) ನೀಡಲಾಗುತ್ತಿತ್ತು. ಇನ್ನು ಮುಂದೆ ಡಿಜಿಟಲ್ ಸರ್ಟಿಫಿಕೇಟ್ ನೀಡಲು ಕೇರಳ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.
ಮುದ್ರಣ ದೋಷದಿಂದಾಗಿ 2017-18ನೇ ಶೈಕ್ಷಣಿಕ ವರ್ಷದಲ್ಲಿ ಕೇರಳ ರಾಜ್ಯದಲ್ಲಿ ವಿತರಿಸಿದ ಪ್ರಮಾಣಪತ್ರಗಳು ಹಲವು ಜಿಲ್ಲೆಗಳಲ್ಲಿ ವಿವಾದಕ್ಕೊಳಗಾಗಿದ್ದವು. ವಿದ್ಯಾರ್ಥಿಗಳ ಹೆಸರು, ಮಾಹಿತಿ, ಅಂಕಗಳು ಅಳಿಸಿ ಹೋದ ಹಿನ್ನೆಲೆಯಲ್ಲಿ ಇಂತಹ ಪ್ರಮಾಣಪತ್ರಗಳನ್ನು ಹಿಂಪಡೆದು ಮರುಮುದ್ರಣ ನಡೆಸಲು ಸಾರ್ವಜನಿಕ ಶಿಕ್ಷಣ ನಿರ್ದೇಶಕರು ಮತ್ತು ಪರೀಕ್ಷಾ ಆಯುಕ್ತರಿಗೆ ಕೇರಳ ಸರಕಾರವು ಅಂದು ಸ್ಪಷ್ಟ ಆದೇಶ ನೀಡಿತ್ತು.
ಅದರಂತೆ ಮೊದಲ ಹಂತದಲ್ಲಿ ಕೇರಳದಲ್ಲಿ 2018ರಲ್ಲಿ ಪರೀಕ್ಷೆ ಬರೆದ ಎಲ್ಲರ ಪ್ರಮಾಣಪತ್ರಗಳನ್ನು ಡಿಜಿಟಲ್ ಲಾಕರ್ ವ್ಯವಸ್ಥೆಯ ಮೂಲಕ ಡಿಜಿಟಲ್ ಆಗಿ ವಿತರಿಸಲು ಪರೀಕ್ಷಾ ಭವನ ತೀರ್ಮಾನಿಸಿದೆ. ಕಳೆದ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ನಾಲ್ಕೂವರೆ ಲಕ್ಷದಷ್ಟು ಮಂದಿ ವಿದ್ಯಾರ್ಥಿಗಳ ಡಿಜಿಟಲ್ ಪ್ರಮಾಣಪತ್ರಗಳನ್ನು ಈಗಾಗಲೇ ತಯಾರಿಸಲಾಗಿದೆ.
ಐಟಿ ಮಿಷನ್‍ನ ಸಹಕಾರದೊಂದಿಗೆ ನಡೆಸುವ ಡಿಜಿಟಲ್ ಸರ್ಟಿಫಿಕೇಟ್ ಯೋಜನೆಯು ರಾಜ್ಯದಲ್ಲಿ ಇದೇ ಮೊದಲ ಬಾರಿಯಾಗಿದೆ. ಕೇರಳದ ವಿಶ್ವವಿದ್ಯಾನಿಲಯಗಳ ನೇತೃತ್ವದಲ್ಲಿ ಪದವಿ, ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ನೀಡಲಿರುವ ಕ್ರಮಗಳನ್ನು ಇತ್ತೀಚೆಗೆ ಆರಂಭಿಸಲಾಗಿತ್ತಾದರೂ ಆ ವ್ಯವಸ್ಥೆ ರಾಜ್ಯದಲ್ಲಿ ಇನ್ನೂ ಕೂಡ ಪೂರ್ಣವಾಗಿಲ್ಲ.
ಸರ್ವರ್‍ಗಳಲ್ಲಿ ಇಲೆಕ್ಟ್ರಾನಿಕ್ ಮಾಹಿತಿ ರೂಪದಲ್ಲಿ ಪ್ರಮಾಣಪತ್ರಗಳು, ದಾಖಲೆಪತ್ರಗಳನ್ನು ದಾಸ್ತಾನಿಡುವ ನೂತನ ಕ್ಲೌಡ್ ಕಂಪ್ಯೂಟಿಂಗ್‍ನ್ನು ಡಿಜಿ ಲಾಕರ್ ವ್ಯವಸ್ಥೆಯಲ್ಲಿ ಉಪಯೋಗಿಸಬಹುದಾಗಿದೆ. ಪರೀಕ್ಷಾ ಕಾರ್ಯದರ್ಶಿಯ ಡಿಜಿಟಲ್ ಸಿಗ್ನೇಚರ್ ದಾಖಲಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಪ್ರಮಾಣಪತ್ರಗಳನ್ನು ಮೂರು ವಾರದೊಳಗೆ ವಿದ್ಯಾರ್ಥಿಗಳಿಗೆ ನೀಡಲು ತೀರ್ಮಾನಿಸಲಾಗಿದೆ.
ವಿದ್ಯಾರ್ಥಿಗಳ ಆಧಾರ್ ನಂಬರ್, ಯೂಸರ್ ನೇಮ್, ಪಾಸ್‍ವರ್ಡ್‍ಗಳನ್ನು ಉಪಯೋಗಿಸಿ ಎಲ್ಲಿ ಬೇಕಾದರೂ ಡೌನ್‍ಲೋಡ್ ಮಾಡಿ ಡಿಜಿಟಲ್ ಎಸ್‍ಎಸ್‍ಎಲ್‍ಸಿ ಸರ್ಟಿಫಿಕೇಟ್‍ಗಳನ್ನು ತೆಗೆಯಬಹುದಾಗಿರುವುದರಿಂದ ಉಳಿದ ಆವಶ್ಯಕತೆಗೆ ಅಸಲಿಗೆ ಬದಲಾಗಿ ಡಿಜಿಟಲ್ ಸಹಿ ದಾಖಲಿಸಿದ ಇ- ಸರ್ಟಿಫಿಕೇಟ್‍ಗಳು ಸಾಕಾಗಲಿವೆ. ಡಿಜಿಟಲ್ ಸರ್ಟಿಫಿಕೇಟ್ ಯೋಜನೆಯು ಮುಂದಿನ ವರ್ಷಗಳಲ್ಲೂ ಮುಂದುವರಿಯಲಿದೆ ಎಂದು ಪರೀಕ್ಷಾ ಭವನದ ಆಯುಕ್ತರು ತಿಳಿಸಿದ್ದಾರೆ.
ಮಕ್ಕಳಿಗೆ ಸಮರ್ಪಕ ವಿವರಣೆ : ಕೇರಳ ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಡಿಜಿಟಲ್ ಸರ್ಟಿಫಿಕೇಟ್‍ಗಳನ್ನು ಪ್ರತಿ ವರ್ಷ ಸರಕಾರದಿಂದ ಪ್ರತ್ಯೇಕ ಅನುಮತಿ ಪಡೆದು ಹೊರತರಲು ನಿರ್ಧರಿಸಲಾಗಿದೆ. ಡಿಜಿಟಲ್ ಸರ್ಟಿಫಿಕೇಟ್‍ಗಳು ಮಕ್ಕಳಿಗೆ ಹೆಚ್ಚು ಅನುಕೂಲಕರವಾಗಲಿದೆ. ಈ ನಿಟ್ಟಿನಲ್ಲಿ ಶಾಲಾ ಅಧಿಕೃತರು ಮಕ್ಕಳಿಗೆ ಸಮಗ್ರ ವಿವರಣೆ ನೀಡುವರು. ಅಲ್ಲದೆ ಡಿಜಿಟಲ್ ಪ್ರಮಾಣಪತ್ರಗಳು ಹೇಗೆ ಉಪಯುಕ್ತವಾಗಲಿವೆ ಎಂಬುದನ್ನು ತಿಳಿಯಪಡಿಸುವರು.


