ಮುಖ್ಯ ಶಿಕ್ಷಕರ ಬದಲಿ ಶಿಕ್ಷಕರ ವಿರುದ್ಧ ಕ್ರಮ
0
ಡಿಸೆಂಬರ್ 21, 2018
ಕಾಸರಗೋಡು: ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಬದಲಿಗೆ ಇತರ ಶಿಕ್ಷಕರನ್ನಿಟ್ಟುಕೊಂಡು ತರಗತಿ ನಡೆಸುವ ವ್ಯವಸ್ಥೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆಯು ನಿರ್ಧರಿಸಿದೆ. ಕೇರಳದಾದ್ಯಂತ ಈ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಆದರೆ ಇದರಿಂದಾಗಿ ಶಾಲಾ ಮಕ್ಕಳ ಕಲಿಕೆಗೆ ಸಮಸ್ಯೆಯಾದೀತು ಎಂಬ ಆತಂಕವೂ ಇದೀಗ ಮನೆ ಮಾಡಿದ್ದು, ಈ ನಿಟ್ಟಿನಲ್ಲಿ ಸರಕಾರದ ಮುಂದಿನ ನಡೆ ಕಾದುನೋಡಬೇಕಾಗಿದೆ.
ಶಾಲಾ ಸಂಬಂಧಿತ ಹಲವಾರು ಒತ್ತಡಗಳ ನಡುವೆ ಮುಖ್ಯ ಶಿಕ್ಷಕರಿಗೆ ಹೆಚ್ಚಾಗಿ ತರಗತಿಗಳಿಗೆ ನಿಖರವಾಗಿ ಹೋಗಲು ಸಮಯ ದೊರಕುವುದಿಲ್ಲ. ಈ ನಿಟ್ಟಿನಲ್ಲಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಹಲವು ಮಂದಿ ಮುಖ್ಯ ಶಿಕ್ಷಕರು ಬದಲಿ ಶಿಕ್ಷಕರನ್ನು ನೇಮಿಸುತ್ತಾರೆ. ಆದರೆ ಈ ರೀತಿ ಬದಲಿ ಶಿಕ್ಷಕರ ಮೂಲಕ ಪಾಠ ಮಾಡಿಸುವುದರ ವಿರುದ್ಧ ಶಿಕ್ಷಣ ಇಲಾಖೆಯು ಈಗಾಗಲೇ ಎಚ್ಚರಿಕೆ ನೀಡಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಖ್ಯ ಶಿಕ್ಷಕರು ಮಧ್ಯಾಹ್ನದೂಟ ಮತ್ತಿತರ ಕರ್ತವ್ಯಗಳನ್ನು ಮಾಡಿ ಮುಗಿಸಬೇಕಾಗಿರುವುದರಿಂದ ಬದಲಿ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಆದರೂ ಶಿಕ್ಷಣ ಇಲಾಖೆಯು ಇಂತಹ ವ್ಯವಸ್ಥೆಯ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಶಿಕ್ಷಣ ಉಪಜಿಲ್ಲಾ ಅಧಿಕಾರಿಗಳ ಸಭೆ ನಡೆಸಿ ಸಮರ್ಪಕ ನಿರ್ದೇಶನಗಳನ್ನು ನೀಡಲಾಗಿದೆ.
ಉಪಜಿಲ್ಲಾ ಶಿಕ್ಷಣಾಧಿಕಾರಿಗಳು (ಎಇಒಗಳು) ಬದಲಿ ಶಿಕ್ಷಕರನ್ನು ನೇಮಿಸುವ ಮುಖ್ಯ ಶಿಕ್ಷಕರ ಹೆಸರು ಹಾಗೂ ಸಂಪೂರ್ಣ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕಾಗಿದೆ. ಬದಲಿ ಶಿಕ್ಷಕರ ನೇಮಕಾತಿ ಮಾಡಿರುವುದು ಕಂಡುಬಂದರೆ ಈ ವರ್ಷ ಅವರು ಪಡೆದ ಸಂಪೂರ್ಣ ವೇತನವನ್ನು ಮರುಪಾವತಿಸಬೇಕಾಗಿ ಬರಲಿದೆ ಎಂದು ಉಪಜಿಲ್ಲಾ ಶಿಕ್ಷಣಾಧಿಕಾರಿಗಳು ಮುಖ್ಯ ಶಿಕ್ಷಕರಿಗೆ ಮುನ್ನೆಚ್ಚರಿಕೆ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಈ ನಿಯಮವನ್ನು ಕಟ್ಟುನಿಟ್ಟುಗೊಳಿಸಿದರೆ ಮಕ್ಕಳ ಕಲಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಮುಖ್ಯ ಶಿಕ್ಷಕರ ವಾದವಾಗಿದೆ. ಪ್ರಾಥಮಿಕ ಶಾಲೆಗಳಲ್ಲಿ ಸಬ್ಜೆಕ್ಟ್ ಸಿಸ್ಟಮ್ ಬದಲು ಕ್ಲಾಸ್ ಸಿಸ್ಟಮ್ ಆಗಿರುವುದರಿಂದ ಒಬ್ಬನೇ ಶಿಕ್ಷಕ ಎಲ್ಲ ವಿಷಯಗಳಲ್ಲಿ ಪಠ್ಯ ಬೋಧನೆ ಮಾಡಬೇಕಾಗಿದೆ. ಇದರಿಂದ ಒಂದು ದಿನ ಶಿಕ್ಷಕ ಶಾಲೆಯಲ್ಲಿ ಇಲ್ಲದಿದ್ದರೆ ಇಡೀ ದಿನ ಮಕ್ಕಳಿಗೆ ನಷ್ಟವಾಗಲಿದೆ. ಈ ಪರಿಸ್ಥಿತಿಯನ್ನು ನಿವಾರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಶಿಕ್ಷಕರು ಆಗ್ರಹಿಸಿದ್ದಾರೆ. ಅಲ್ಲದೆ ಬದಲಿ ಶಿಕ್ಷಕರನ್ನು ನೇಮಿಸುವ ಜವಾಬ್ದಾರಿಯನ್ನು ತಮಗೆ ಮತ್ತೆ ನೀಡಬೇಕೆಂದು ಮುಖ್ಯ ಶಿಕ್ಷಕರು ಸರಕಾರಕ್ಕೆ ಮಾಹಿತಿ ತಲುಪಿಸಿ ಒತ್ತಾಯಿಸಿದ್ದಾರೆ. ಆದರೆ ಕೇರಳ ಸರಕಾರ ಮಾತ್ರ ಈ ನಿಟ್ಟಿನಲ್ಲಿ ಸಮರ್ಪಕ ಯಾವುದೇ ಅಂತಿಮ ಕ್ರಮ ಕೈಗೊಳ್ಳದೇ ವ್ಯವಸ್ಥೆಯಿಂದ ಜಾರಿಗೊಳ್ಳುವಂತೆ ಕಂಡುಬರುತ್ತಿದೆ.


