ಎನ್‍ಆರ್‍ಇಜಿ ಯೂನಿಯನ್‍ನಿಂದ ಧರಣಿ
0
ಡಿಸೆಂಬರ್ 20, 2018
ಮಂಜೇಶ್ವರ: ಉದ್ಯೋಗ ಖಾತರಿ ಕಾರ್ಮಿಕರಿಗೆ ಸೂಕ್ತ ಕ್ಷೇಮ ನಿಧಿ ಸೌಕರ್ಯಗಳನ್ನು ಕೇಂದ್ರ ಸರಕಾರ ನೀಡಬೇಕು. 2017-18 ನೇ ವರ್ಷದಲ್ಲಿ ಹೇಳಿಕೊಂಡಂತೆ ಕಾರ್ಮಿಕರಿಗೆ 150 ದಿನಗಳ ಉದ್ಯೋಗವನ್ನು ನೀಡಬೇಕು. ಕ್ಲಪ್ತ ಸಮಯಕ್ಕೆ ಕಾರ್ಮಿಕರಿಗೆ ನೀಡಲಾಗುವ ದಿನಗೂಲಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆಗಳನ್ನು ಮುಂದಿಟ್ಟು ಉದ್ಯೋಗ ಖಾತರೀ ಯೋಜನೆಯ (ಎನ್.ಆರ್.ಇ.ಜಿ) ವರ್ಕಸ್ ಯೂನಿಯನ್ ವತಿಯಿಂದ ಹೊಸಂಗಡಿ ಪ್ರಧಾನ ಅಂಚೆ ಕಚೇರಿ ಮುಂದೆ ಗುರುವಾರ ಧರಣಿ ನಡೆಸಲಾಯಿತು.
ಸಿ.ಐ.ಟಿ.ಯು ಜಿಲ್ಲಾ ಉಪಾಧ್ಯಕ್ಷೆ ಬೇಬಿ ಶೆಟ್ಟಿ ಧರಣಿ ಉದ್ಘಾಟಿಸಿ ಮಾತನಾಡಿ ದಿನಗೂಲಿ ಕಾರ್ಮಿಕರಿಗೆ ಕಾಲಕ್ಕೆ ತಕ್ಕಂತೆ ನೀಡಲ್ಪಡುವ ದಿನಗೂಲಿ ವೇತನವನ್ನು ಹೆಚ್ಚಿಸಬೇಕು ಎಂದು ಹೇಳಿದರು. ಗ್ರಾಮೀಣ ಪ್ರದೇಶದಲ್ಲಿ ಕಾರ್ಮಿಕರಿಗೆ ಉದ್ಯೋಗ ಖಾತರಿ ಯೋಜನೆಯಡಿ ಸೂಕ್ತ ರೀತಿಯಲ್ಲಿ ವರ್ಷವೊಂದಕ್ಕೆ 150 ದಿನಗಳ ಉದ್ಯೋಗವನ್ನು ದೊರಕಿಸಿಕೊಡಬೇಕಿದೆ ಎಂದರು.
ಏರಿಯಾ ಸಮಿತಿ ಅಧ್ಯಕ್ಷೆ ಸರಸ್ವತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಮಚಂದ್ರ ಮಾಸ್ಟರ್, ಅಬ್ದುಲ್ ಲತೀಫ್.ಬಿ.ಎ, ಶುಭಾಶಂಸನೆಗೈದರು. ಡಿ.ಕಮಲಾಕ್ಷ, ಐರಿನ್ ಜೋಸೆಫಿನ್, ಗಂಗಾಧರ ದುರ್ಗಿಪಳ್ಳ, ಪಂಚಾಯತ್ ಸದಸ್ಯರಾದ ಇಂದಿರಾ ಕಾಯರಡ್ಕ, ಆಶಾಲತಾ, ಜಗನ್ನಾಥ.ಎಂ. ಉಪಸ್ಥಿತರಿದ್ದರು. ಏರಿಯಾ ಕಾರ್ಯದರ್ಶಿ ಡಿ.ಬಾಬು ಸ್ವಾಗತಿಸಿ, ಭಾರತಿ ಸತೀಶ್ ವಂದಿಸಿದರು.


