ಅನಂತಪುರದಲ್ಲಿ ಶ್ರೀಮದ್ ಭಾಗವತ ಸಪ್ತಾಹ ಆರಂಭ ಭಾಗವತ ಚಿಂತನೆಗಳಿಂದ ಸಂಕಷ್ಟಗಳಿಂದ ಪಾರು-ಬ್ರಹ್ಮಶ್ರೀ ದೇಲಂಪಾಡಿ ತಂತ್ರಿ
0
ಡಿಸೆಂಬರ್ 20, 2018
ಕುಂಬಳೆ: ಸತ್ ಚಿಂತನೆಯ, ಆಧ್ಯಾತ್ಮಿಕ ಶಕ್ತಿ ಸಂಚಯನಗಳಿಗೆ ಪ್ರತಿಯೊಬ್ಬರೂ ಇಂದು ಸಾಕಷ್ಟು ಆಸಕ್ತಿ ಮೂಡಿಸಬೇಕಿದೆ. ಭಗವಂತನ ಜ್ಞಾನವಲ್ಲದೆ ಭವ ಸಂಕಟಗಳಿಂದ ಪಾರಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾಮಸ್ಮರಣೆಯೊಂದಿಗೆ ಶ್ರೀಮದ್ಬಾಗತದ ಚಿಂತನೆಗಳನ್ನು ಅರಿತಿರಬೇಕು ಎಂದು ಕುಂಬಳೆ ಸೀಮೆಯ ಪ್ರಧಾನ ತಂತ್ರಿವರ್ಯರಾದ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳು ಅನುಗ್ರಹ ಭಾಷಣಗೈದು ಹಾರೈಸಿದರು.
ಸರೋವರ ಕ್ಷೇತ್ರವೆಂದೇ ಖ್ಯಾತವಾದ ಅನಂತಪುರ ಶ್ರೀಅನಂತಪದ್ಮನಾಭ ದೇವಾಲಯದಲ್ಲಿ ಬುಧವಾರದಿಂದ ಆರಂಭಗೊಂಡ ಶ್ರೀಮದ್ ಭಾಗವತ ಸಪ್ತಾಹಕ್ಕೆ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭ ಉಪಸ್ಥಿತರಿದ್ದು ಮಾತನಾಡಿದ ಖ್ಯಾತ ವೈಧಿಕ ವಿದ್ವಾಂಸ, ಪ್ರವಚನಕಾರ ಬ್ರಹ್ಮಶ್ರೀ ನಾರಾಯಣಮೂರ್ತಿ ಗುರುಪುರ ಅವರು, ಇಂದಿನ ಕಾಲಘಟ್ಟದ ಸವಾಲು-ಸಂಕಷ್ಟಗಳ ಬಗ್ಗೆ ಸಹಸ್ರಾರು ವರ್ಷಗಳ ಹಿಂದೆಯೇ ಬೆಳಕು ತೋರಿಸಿ ಮುನ್ನಡೆಯುವ ದಾರಿ ತೋರಿದ್ದ ವೇದ-ಪುರಾಣಗಳು ಈ ಪುಣ್ಯಭೂಮಿಯ ಅನಘ್ರ್ಯ ಆಸ್ತಿಗಳಾಗಿವೆ. ಆದರೆ ಅವನ್ನು ಅರ್ಥೈಸುವ, ಅದರಂತೆ ಮುನ್ನಡೆಯುವ ಮನೋಭಾವ ನಮ್ಮಲ್ಲಿ ಉದಿಸಿಬರಬೇಕು ಎಂದು ತಿಳಿಸಿದರು.
ಕ್ಷೇತ್ರ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಾಧವ ಕಾರಂತ, ಕ್ಷೇತ್ರದ ಪ್ರಬಂಧಕ ಲಕ್ಷ್ಮಣ ಹೆಬ್ಬಾರ್, ಶ್ರೀಮದ್ ಭಾಗವತ ಸಪ್ತಾಹ ಸಮಿತಿಯ ಕಾರ್ಯದರ್ಶಿ ಸುನಿಲ್ ಕುಮಾರ್, ಭಕ್ತಾದಿಗಳು ಉಪಸ್ಥಿತರಿದ್ದರು.
ಇದಕ್ಕೂ ಮೊದಲು ಸಂಜೆ ಶ್ರೀಕ್ಷೇತ್ರಕ್ಕೆ ಆಗಮಿಸಿದ ಸಪ್ತಾಹ ಯಜ್ಞಾಚಾರ್ಯ ಬ್ರಹ್ಮ ಶ್ರೀನಾರಾಯಣ ಮೂರ್ತಿ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಸ್ವಾಗತಿಸಲಾಯಿತು.ಸಪ್ತಾಹ ಚಾಲನೆಯ ಬಳಿಕ ಶ್ರೀಮದ್ಭಾಗವತ ಮಹಾತ್ಮ್ಯೆ ಪಾರಾಯಣ ಹಾಗೂ ಪ್ರವಚನ ನಡೆಯಿತು. ಗುರುವಾರ ಸಂಜೆ ಸಾಮೂಹಿಕ ಅರ್ಚನೆ, ಸಾಮೂಹಿಕ ಪ್ರಾರ್ಥನೆ, ನಾಮ ಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರ ಬಳಿಕ ವ್ಯಾಸ-ನಾರದ ಸಂವಾದ, ಕುಂತೀ ಸ್ತುತಿ,ಭೀಷ್ಮ ಸ್ತುತಿ, ಚತುಷ್ಲೋಕಿ ಭಾಗವತ, ಬ್ರಹ್ಮ ನಾರದ ಸಂವಾದ ಭಾಗಗಳ ಪಾರಾಯಣ-ಪ್ರವಚನ ನಡೆಯಿತು. ಇಂದು (ಶುಕ್ರವಾರ) ಸಾಮೂಹಿಕ ಅರ್ಚನೆ, ಪ್ರಾರ್ಥನೆ, ನಾಮಪ್ರದಕ್ಷಿಣೆ, ಸಾಮೂಹಿಕ ನಮಸ್ಕಾರಗಳ ಬಳಿಕ ಕಪಿಲಾವತಾರ, ಕಪಿಲೋಪದೇಶ, ದಕ್ಷಯಾಗ ಧ್ರುವಚರಿತ್ರೆ, ಋಷಭಾವತಾರ, ಭದ್ರಕಾಳಿ ಅವತಾರಗಳ ಪಾರಾಯಣ ಪ್ರವಚನಗಳು ನಡೆಯಲಿವೆ.



