ಕಣ್ಣೂರು ವಿವಿಯಲ್ಲಿ ಸಂಶೋಧನಾ ಕೇಂದ್ರಗಳನ್ನು ಆರಂಭಿಸಲು ಕ್ರಮ
0
ಡಿಸೆಂಬರ್ 26, 2018
ಕಾಸರಗೋಡು: ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ನೂತನ ಸಂಶೋಧನಾ ಕೇಂದ್ರಗಳನ್ನು ಒಳಗೊಂಡ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಲಾಗಿದೆ. 2019-20ರ ಕಣ್ಣೂರು ವಿಶ್ವವಿದ್ಯಾನಿಲಯ ಮುಂಗಡಪತ್ರದಲ್ಲಿ ಈ ಕುರಿತು ನಿರ್ದೇಶನ ಮಾಡಲಾಗಿದೆ.
266.21 ಕೋಟಿ ರೂ. ಆದಾಯ, 261.38 ಕೋಟಿ ರೂ. ವೆಚ್ಚ ಹಾಗೂ 3.18 ಕೋಟಿ ರೂ. ಮಿಗತೆ ಅಂದಾಜಿಸುವ ಮುಂಗಡಪತ್ರವನ್ನು ಹಣಕಾಸು ಸಮಿತಿಯ ಸಂಚಾಲಕ ಪಿ.ಸಂತೋಷ್‍ಕುಮಾರ್ ಮಂಡಿಸಿದರು. ಯೋಜನಾ ರೂಪದಲ್ಲಿ ಕೇರಳ ಸರಕಾರದಿಂದ 25 ಕೋಟಿ ರೂ. ಲಭಿಸಲಿದೆ ಎಂದು ಮುಂಗಡಪತ್ರದಲ್ಲಿ ವಿವರಿಸಲಾಗಿದೆ.
ತೆರವಾದ 37 ಅಧ್ಯಾಪಕರ ಹುದ್ದೆಗಳಿಗೆ ಹೊಸದಾಗಿ ನೇಮಕಾತಿ ನಡೆಯಲಿದೆ. ಇದಕ್ಕಾಗಿ 1158.40 ಲಕ್ಷ ರೂ. ಗಳನ್ನು ಮೀಸಲಿರಿಸಲಾಗಿದೆ. ಕಳೆದ ವರ್ಷಕ್ಕಿಂತ 3.60 ಕೋಟಿ ರೂ. ಹೆಚ್ಚುವರಿ ಮೊತ್ತ ಇದಾಗಿದೆ. ವಿದ್ಯಾರ್ಥಿಗಳಿಗಿರುವ ಕೋಚಿಂಗ್ ಕ್ಯಾಂಪಸ್‍ಗಳು, ಕ್ರೀಡಾ ತಾರೆಗಳಿಗಿರುವ ಸ್ಕಾಲರ್‍ಶಿಪ್‍ಗಳು, ಅಂತರ್ ಕಾಲೇಜು ಮಟ್ಟದ, ವಿಶ್ವವಿದ್ಯಾನಿಲಯ ಮಟ್ಟದ ಸ್ಪರ್ಧೆಗಳು, ನಗದು ಪುರಸ್ಕಾರಗಳಿಗಾಗಿ 83 ಲಕ್ಷ ರೂ., ವಿ.ವಿ. ಯೂನಿಯನ್‍ನ ಚಟುವಟಿಕೆಗಳಿಗಾಗಿ 22.5 ಲಕ್ಷ ರೂ., ಅಂತರ್ ವಿ.ವಿ. ಕಲೋತ್ಸವಕ್ಕಾಗಿ 8 ಲಕ್ಷ ರೂ. ಗಳನ್ನು ಬಜೆಟ್‍ನಲ್ಲಿ ಒಳಪಡಿಸಲಾಗಿದೆ.


