ಜಿಎಸ್ ಟಿ ಜಾರಿಯ ನಂತರ ಪ್ರತಿ ಕುಟುಂಬಕ್ಕೆ ಮಾಸಿಕ ೩೨೦ ರೂ ಉಳಿತಾಯ!
0
ಡಿಸೆಂಬರ್ 18, 2018
ನವದೆಹಲಿ: ಜನಸಾಮಾನ್ಯರಿಗೇನು ಲಾಭ?" ಇಂಥಹದ್ದೊಂದು ಪ್ರಶ್ನೆ ದೊಡ್ಡ ಪ್ರಮಾಣದಲ್ಲಿ ಯಾವುದೇ ಯೋಜನೆಗಳನ್ನು ಸರ್ಕಾರಗಳು ಜಾರಿಗೆ ತಂದಾಗ ಸಹಜವಾಗಿ ಮೂಡುವ ಪ್ರಶ್ನೆ. ಇಂಥಹದ್ದೇ ಪ್ರಶ್ನೆ ಕೇಂದ್ರ ಸರ್ಕಾರ ಜಿಎಸ್ ಟಿ ಜಾರಿಗೆ ತಂದಾಗಲೂ ಇಂಥಹದ್ದೇ ಪ್ರಶ್ನೆ ಮೂಡಿತ್ತು. ಈ ಪ್ರಶ್ನೆಗೆ ಉತ್ತರ ನೀಡಬಹುದಾದ ವಿಶ್ಲೇಷಣೆ ಹೊರಬಂದಿದ್ದು ಜಿಎಸ್ ಟಿ ಜಾರಿಯ ನಂತರ ಪ್ರತಿ ಕುಟುಂಬಕ್ಕೆ ಸರಾಸರಿ ೩೨೦ ರೂಪಾಯಿ ಉಳಿತಾಯವಾಗುತ್ತಿದೆ ಎನ್ನಲಾಗಿದೆ.
ಗ್ರಾಹಕ ವೆಚ್ಚದ ಮಾಹಿತಿಯ ವಿಶ್ಲೇಷಣೆಯ ಪ್ರಕಾರ, ಜಿಎಸ್ ಟಿ ಜಾರಿಯ ನಂತರ ಧಾನ್ಯಗಳು, ಖಾದ್ಯ ತೈಲ ಮತ್ತು ಸೌಂದರ್ಯವರ್ಧಕಗಳಂತಹ ಪದಾರ್ಥಗಳ ಖರೀದಿಯಲ್ಲಿ ಪ್ರತಿ ತಿಂಗಳು ಸರಾಸರಿ ಭಾರತೀಯ ಕುಟುಂಬವೊಂದಕ್ಕೆ ೩೨೦ ರೂಪಾಯಿ ಉಳಿತಾಯ ಆಗುತ್ತಿದೆ.
ಕೇಂದ್ರ ಹಾಗೂ ರಾಜ್ಯಗಳ ೧೭ ವಿಧದ ತೆರಿಗೆಗಳನ್ನು ಒಟ್ಟುಗೂಡಿಸಿ ಜು.೧ ೨೦೧೭ ರಂದು ಕೇಂದ್ರ ಸರ್ಕಾರ ಜಿಎಸ್ ಟಿ ಯನ್ನು ಜಾರಿಗೊಳಿಸಿತ್ತು. ಇದರಿಂದಾಗಿ ಸಾಮಾನ್ಯವಾಗಿ ದಿನ ನಿತ್ಯ ಬಳಕೆ ಮಾಡುವ ೮೩ ಪದಾರ್ಥಗಳ ಬೆಲೆ ಕಡಿಮೆಯಾಗಿದ್ದು, ಧಾನ್ಯಗಳು, ಖಾದ್ಯ ತೈಲ, ಸಕ್ಕರೆ, ಚಾಕೊಲೇಟುಗಳು, ನಮ್ಕೀನ್ ಮತ್ತು ಸಿಹಿತಿಂಡಿಗಳು, ಸೌಂದರ್ಯವರ್ಧಕಗಳು ಮತ್ತು ಸುಗಂಧದ್ರವ್ಯಗಳು, ವಾಷಿಂಗ್ ಪೌಡರ್, ಪೀಠೋಪಕರಣ ಮತ್ತು ಕಾಯಿರ್ ಉತ್ಪನ್ನಗಳು ಸೇರಿದಂತೆ ಸಾಮಾನ್ಯ ಬಳಕೆಯ ವಸ್ತುಗಳ ಖರೀದಿಗೆ ಒಂದು ಕುಟುಂಬ ೮,೪೦೦ ರೂಪಾಯಿ ಖರ್ಚು ಮಾಡಿದರೆ ಜಿಎಸ್ ಟಿ ಜಾರಿಯ ನಂತರ ೩೨೦ ರೂಪಾಯಿಗಳು ಉಳಿತಾಯವಾಗುತ್ತಿದೆ.
ಈ ಎಲ್ಲಾ ವಸ್ತುಗಳಿಗೆ ಜಿಎಸ್ ಟಿ ಅಡಿಯಲ್ಲಿ ಪಾವತಿಸಲಾಗುತ್ತಿರುವ ತೆರಿಗೆ ೫೧೦ ರೂಪಾಯಿ ಆದರೆ ಈ ಹಿಂದೆ ಇಷ್ಟೇ ಪದಾರ್ಥಗಳ ಖರೀದಿಗೆ ೮೩೦ ರೂಪಾಯಿ ತೆರಿಗೆ ಪಾವತಿ ಮಾಡಬೇಕಿತ್ತು. ಆದರೆ ಜಿಎಸ್ ಟಿ ಜಾರಿಯ ನಂತರ ೩೨೦ ರೂಪಾಯಿ ತಿಂಗಳಿಗೆ ಉಳಿತಾಯವಾಗುತ್ತಿದೆ ಎಂದು ಗ್ರಾಹಕ ವೆಚ್ಚದ ಮಾಹಿತಿ ವಿಶ್ಲೇಷಿಸಿದೆ.


